ಬೆಂಗಳೂರು: ರಾಜ್ಯದಲ್ಲಿ ಜಾತಿಯ ವಿಷ ಬೀಜ ಬಿತ್ತಿ ಪ್ರತ್ಯೇಕತೆಯ ಕೂಗು ಕೇಳಿ ಬರಲು ಮಾಜಿ ಪ್ರಧಾನಿ ಹಾಗು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸೋಮವಾರ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಕರ್ನಾಟಕ ಏಕೀಕರಣವಾದ ಮೇಲೆ ಇದುವರೆಗೂ ರಾಜ್ಯದಲ್ಲಿ ಪ್ರತ್ಯೇಕತೆಯ ಕೂಗು ಕೇಳಿ ಬಂದಿರಲಿಲ್ಲ. ಆದರೆ, ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಮೇಲೆ ಈ ಕೂಗು ಕೇಳಿ ಬರುತ್ತಿದೆ. ಕುಮಾರಸ್ವಾಮಿ ಅವರ ಸೊಕ್ಕಿನ ಮಾತು ಮತ್ತು ಸೇಡಿನ ಧಾಟಿ ಜನರನ್ನು ರೊಚ್ಚಿಗೇಳಿಸಿದೆ. ದೇವೇಗೌಡರ ಅನುಮತಿ ಇಲ್ಲದೇ ಮುಖ್ಯಮಂತ್ರಿಗಳು ಈ ರೀತಿ ಹೇಳಲು ಸಾಧ್ಯವೇ? ಈ ವಿಚಾರದಲ್ಲಿ ದೇವೇಗೌಡರೇಕೆ ಮೌನ ವಹಿಸಿದ್ದಾರೆ ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ. 


ಮುಂದುವರೆದು ಮಾತಾನಾಡಿದ ಅವರು, ಇದುವರೆಗೂ ಬಿಜೆಪಿ ಶಾಸಕರು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಿಲ್ಲ. ಆದರೆ ಉತ್ತರ ಕರ್ನಾಟಕ ಭಾಗದ ಜನರ ಅಭಿವೃದ್ಧಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ಶ್ರೀರಾಮುಲು ಜತೆ ಮಾತನಾಡಿದ್ದೇನೆ. ನಾಳೆ ಉಮೇಶ್ ಕತ್ತಿಯವರನ್ನು ಭೇಟಿ ಮಾಡುತ್ತೇನೆ. ಉತ್ತರ ಕರ್ನಾಟಕ ಪ್ರತ್ಯೇಕತೆ ಬೆಂಕಿ ಹತ್ತಿಕೊಳ್ಳಲು ದಿನೇಶ್ ಗುಂಡೂರಾವ್​ರಂತಹ ಕಾಂಗ್ರೆಸ್ ಮುಖಂಡರು ನೀಡಿರುವ ‌ಹೇಳಿಕೆಗಳು ಕಾರಣ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ.


ಬಿಜೆಪಿಯ ಧ್ಯೇಯ ಏನಿದ್ದರೂ ಅಖಂಡ ಕರ್ನಾಟಕವೇ ಹೊರತು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಅಲ್ಲ. ಹಾಗಾಗಿ ಉತ್ತರ ಕರ್ನಾಟಕದ 13 ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿಯ ಶಾಸಕರು ಮತ್ತು ಜನರೊಂದಿಗೆ ಮಾತುಕತೆ ನಡೆಸಿ, ಆ.2ರ ಬಂದ್ ಕರೆ ಹಿಂಪಡೆಯುವಂತೆ ಮನವಿ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.