ಕೆಪಿಸಿಸಿ ವಿಸರ್ಜನೆ ಬಗ್ಗೆ ದಿನೇಶ್ ಗುಂಡೂರಾವ್ ಹೇಳಿದ್ದೇನು?
ಕೆಪಿಸಿಸಿ ಮಾತ್ರವಲ್ಲ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್‌ನಲ್ಲಿಯೂ ಬದಲಾವಣೆ ಮಾಡಲಿದ್ದೇವೆ. ಇಡೀ ಪಕ್ಷ ಸಂಘಟನೆಯಲ್ಲಿಯೇ ಬದಲಾವಣೆಯಾಗಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ವಿಸರ್ಜಿಸಿ ಎಐಸಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಮಾತ್ರವಲ್ಲ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್‌ನಲ್ಲಿಯೂ ಸಂಪೂರ್ಣ ಬದಲಾವಣೆಯಾಗಲಿದೆ ಎಂದಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,"ಪಕ್ಷ ಸಂಘಟನೆಯಲ್ಲಿ ಬದಲಾವಣೆ ಮಾಡಬೇಕು ಎಂದು ನಾವು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಚುನಾವಣೆಗೂ ಮೊದಲೇ ಮನವಿ ಮಾಡಿದ್ದೆವು. ಅದಕ್ಕೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಕೆಪಿಸಿಸಿ ಮಾತ್ರವಲ್ಲ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್‌ನಲ್ಲಿಯೂ ಬದಲಾವಣೆ ಮಾಡಲಿದ್ದೇವೆ. ಇಡೀ ಪಕ್ಷ ಸಂಘಟನೆಯಲ್ಲಿಯೇ ಬದಲಾವಣೆಯಾಗಲಿದೆ" ಎಂದು ಹೇಳಿದರು.
ಶಾಸಕ ರೋಷನ್ ಬೇಗ್ ಅಮಾನತು ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಪ್ರಾಥಮಿಕ ವಿಚಾರಣೆ ಬಳಿಕ ಅವರ ಅಮಾನತು ಮಾಡಲಾಗಿದೆ. ಹೆಚ್ಚಿನ ವಿಚಾರಣೆ ಬಳಿಕ ಮುಂದಿನ ಕ್ರಮ ಏನು ಎಂಬುದನ್ನು ಕೆಪಿಸಿಸಿ ನಿರ್ಧರಿಸಲಿದೆ. ಹಾಗೆಯೇ ಬೇಗ್ ಅವರು ಅಮಾನತಿನ ಬಳಿಕ ಮಾಧ್ಯಮಗಳ ಮುಂದೆ ಹೋಗುವ ಬದಲು ದೆಹಲಿಗೆ ತೆರಳಿ ಹೈಕಮ್ಯಾಂಡ್ ಭೇಟಿ ಮಾಡಿದ್ದರೆ ಒಳ್ಳೆಯದಾಗಿತ್ತು ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಬುಧವಾರ ಎಐಸಿಸಿ ಕೆಪಿಸಿಸಿ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಉಳಿದ ಎಲ್ಲಾ ಸಮಿತಿಗಳ ಪುನಾರಚನೆಗೆ ಸೂಚನೆ ನೀಡಿದೆ.