ಆಪರೇಷನ್ ಕಮಲಕ್ಕೆ 1 ಸಾವಿರ ಕೋಟಿ ರೂ. ಬಳಕೆ, ಇಷ್ಟೊಂದು ಹಣ ಎಲ್ಲಿಂದ ಬಂತು: ದಿನೇಶ್ ಗುಂಡೂರಾವ್ ಪ್ರಶ್ನೆ
ಸೋಮವಾರದ ಕಲಾಪದಲ್ಲಿ ನಾವು ಬಹುಮತ ಸಾಬೀತು ಪಡಿಸುವುದು ನೂರಕ್ಕೆ ನೂರು ಸತ್ಯ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ಬೆಂಗಳೂರು: ಆಪರೇಷನ್ ಕಮಲಕ್ಕೆ 1 ಸಾವಿರ ಕೋಟಿ ರೂ. ಬಳಕೆಯಾಗಿರುವುದಾಗಿ ಗಂಭೀರ ಆರೋಪ ಮಾಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಭಾರತೀಯ ಜನತಾ ಪಕ್ಷ(ಬಿಜೆಪಿ) ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.
ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಕರೆಯಲು ಸಾಧ್ಯವೇ?
ಭಾನುವಾರ ರಾತ್ರಿ ತಾಜ್ ವಿವಾಂತ ಹೊಟೇಲ್ ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಮೈತ್ರಿ ಸರ್ಕಾರದ ಪ್ರತಿಯೊಬ್ಬ ಶಾಸಕರಿಗೆ ಬಿಜೆಪಿಯ ಮುರಳೀಧರ್ ರಾವ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ ತಲಾ 20ರಿಂದ 30 ಕೋಟಿ ರೂಪಾಯಿ ಕೊಡುವುದಾಗಿ ಹೇಳಿದ್ದ ಆಡಿಯೋ ಟೇಪ್ಗಳನ್ನು ನಾವು ಕೇಳಿಸಿಕೊಂಡಿದ್ದೇವೆ. ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಕರೆಯಲು ಸಾಧ್ಯವೇ? ಇದೆಲ್ಲದಕ್ಕೂ ಸೋಮವಾರದ ಕಲಾಪದಲ್ಲಿ ಉತ್ತರ ಸಿಗಲಿದೆ ಎಂದರು.
ಸೋಮವಾರ ಬಹುಮತ ಸಾಬೀತು ನೂರಕ್ಕೆ ನೂರು ಸತ್ಯ:
ಸೋಮವಾರವಾದರೂ ಬಹುಮತ ಸಾಬೀತಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಸೋಮವಾರದ ಕಲಾಪದಲ್ಲಿ ನಾವು ಬಹುಮತ ಸಾಬೀತು ಪಡಿಸುವುದು ನೂರಕ್ಕೆ ನೂರು ಸತ್ಯ ಎಂದು ತಿಳಿಸಿದರು.