ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರಿಗೆ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಬೆಂಬಲವೂ ಇದೇ ಎಂಬುದನ್ನು ಸ್ವತಃ ಸುಮಲತಾ ಅವರೇ ಹೇಳಿದ್ದಾರೆ. ಅಷ್ಟೇ ಅಲ್ಲದೆ ಸುಮಲತಾ ಅವರ ಸಭೆಗಳಲ್ಲಿ ಕಾಂಗ್ರೆಸ್ ಧ್ವಜ ಕೂಡಾ ರಾರಾಜಿಸುತ್ತಿರುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುಮಲತಾ ಪರ ಕಾಂಗ್ರೆಸ್‌ ಧ್ವಜ ಹಿಡಿದರೆ ಶಿಸ್ತು ಕ್ರಮ ಎದುರಿಸಬೇಕಾದೀತು ಎಂದು ಕಾಂಗ್ರೆಸ್ ಕಾರ್ಯಕತ್ರರಿಗೆ ಎಚ್ಚರಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಗಳವಾರ ರಾತ್ರಿ ಮಂಡ್ಯ ಜಿಲ್ಲಾ ಮುಖಂಡರ ಜೊತೆ ಸಭೆ ನಡೆಸಲಾಗಿದ್ದು, ಎಲ್ಲಾ ಸಮಸ್ಯೆಯೂ ಬಗೆಹರಿದಿವೆ. ಎಲ್ಲರೂ ಒಟ್ಟಾಗಿ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರವಾಗಿ ಕೆಲಸ ಮಾಡಲಿದ್ದಾರೆ ಎಂದರು.


ಪಕ್ಷದ ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿಯ ಪರ ಪ್ರಚಾರ ನಡೆಸುವವರು ಪಕ್ಷ ತ್ಯಜಿಸಿ ಹೋಗಬೇಕು. ಒಂದು ವೇಳೆ ಪಕ್ಷದ ಶಿಸ್ತನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಯಾವುದೇ ಬೇಧ ಭಾವವಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.