ಬೆಂಗಳೂರು: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ 17 ಶಾಸಕರು ಸೋಮವಾರ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ.


COMMERCIAL BREAK
SCROLL TO CONTINUE READING

ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕರು ಸಲ್ಲಿಸಿದ್ದ ರಾಜೀನಾಮೆಗಳನ್ನು ಪರಿಶೀಲಿಸಿ ಭಾನುವಾರ ತೀರ್ಪು ನೀಡಿದ್ದು, ಅದರಂತೆ ರಾಜಿನಾಮೆ ಸಲ್ಲಿಸಿದ್ದ ಎಲ್ಲಾ ಬಂಡಾಯ ಶಾಸಕರನ್ನೂ 2023ರವರೆಗೆ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಈ ಬೆನ್ನಲ್ಲೇ ಅನರ್ಹಗೊಂಡ ಶಾಸಕರು ಇಂದು ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. 


ಈಗಾಗಲೇ ಸ್ಪೀಕರ್ ಅವರು ಅನರ್ಹಗೊಳಿಸಿ ನೀಡಿರುವ ತೀರ್ಪಿಗೆ ಶೀಘ್ರ ತಡೆಯಾಜ್ಞೆ ನೀಡಬೇಕು ಹಾಗೂ ಸ್ಪೀಕರ್ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಮನವಿ ಅರ್ಜಿ ಸಲ್ಲಿಸಲಿದ್ದಾರೆ. 


ಭಾನುವಾರ ಅನರ್ಹಗೊಳಿಸಿ ಸ್ಪೀಕರ್ ಆದೇಶ ನೀಡುತ್ತಿದ್ದಂತೆಯೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಹೆಚ್.ವಿಶ್ವನಾಥ್ ಅವರು, ಸ್ಪೀಕರ್ ಅವರ ಅನರ್ಹತೆ ಆದೇಶ ಕಾನೂನಿಗೆ ವಿರುದ್ಧವಾಗಿದೆ. ಸದನಕ್ಕೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಶಾಸಕಾಂಗದ ಸದಸ್ಯರನ್ನು ಅನರ್ಹಗೊಳಿಸಿದ್ದಾರೆ. ಹೀಗಾಗಿ ನಾವು ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಹೇಳಿದ್ದರು.