ಮೈಸೂರು: ಲಾಕ್‌ಡೌನ್ ವೇಳೆ ಮೈಸೂರು ಜಯಚಾಮರಾಜೇಂದ್ರ ಮೃಗಾಲಯದ ನಿರ್ವಹಣೆಗೋಸ್ಕರ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ (ST Somashekhar) 3ನೇ ಹಂತವಾಗಿ ಗುರುವಾರ 21.14 ಲಕ್ಷ ರೂಪಾಯಿ ಚೆಕ್ ಅನ್ನು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಅವರಿಗೆ ಹಸ್ತಾಂತರಿಸಿದರು. ಇದೇ ವೇಳೆ, ಸೋಮಶೇಖರ್ ಮನವಿ ಮೇರೆಗೆ ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ವತಿಯಿಂದ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು 84 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರಿಸಿದರು.‌ ಇದರಿಂದ ಗುರುವಾರ ಒಂದೇ ದಿನ ಮೃಗಾಲಯಕ್ಕೆ ಒಟ್ಟಾರೆ 1,05,14,000 ರೂ. ದೇಣಿಗೆ ಹರಿದು ಬಂದಂತಾಗಿದೆ.


COMMERCIAL BREAK
SCROLL TO CONTINUE READING

ಒಟ್ಟಾರೆ ಉಸ್ತುವಾರಿ ಸಚಿವ ಸೋಮಶೇಖರ್ ಅವರು ಇದುವರೆಗೆ ತಮ್ಮ ಕ್ಷೇತ್ರ ಹಾಗೂ ಇತರ ಸಚಿವರಿಂದ ಮೃಗಾಲಯಕ್ಕೆ ಒಟ್ಟಾರೆಯಾಗಿ 2,31,60,000 ರೂಪಾಯಿಯನ್ನು ದೇಣಿಗೆಯನ್ನು ತಂದಿದ್ದಾರೆ. ಮೃಗಾಲಯ (Zoo)ಕ್ಕೆ ದೇಣಿಗೆ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಿ 84 ಲಕ್ಷ ರೂ. ಸಂಗ್ರಹಿಸಿ ಕೊಟ್ಟಿರುವ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ನಡೆ ಅವರ ಸಮಾಜಮುಖಿ ಕಾರ್ಯವನ್ನು ತೋರಿಸುತ್ತದೆ ಎಂದು ಬಸವರಾಜು ಬಗ್ಗೆ ಎಸ್.ಟಿ. ಸೋಮಶೇಖರ್ ಮೆಚ್ಚುಗೆಯ ಮಾತುಗಳನ್ನಾಡಿದರು.


ಬಸವರಾಜು ಅಲ್ಲದೆ ಅಮೆರಿಕದ ಅಕ್ಕ ಸಂಸ್ಥೆ ಅಧ್ಯಕ್ಷರಾದ ಅಮರನಾಥ ಅವರೊಂದಿಗೆ ಮಾತನಾಡಿದ್ದೇನೆ. ಅವರೂ ದೇಣಿಗೆ ಬಗ್ಗೆ ಮಾಹಿತಿ ನೀಡಿದ್ದೇನೆ. ಅವರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಅಕ್ಕ ಸಮ್ಮೇಳನ ನಡೆಯದಿರುವುದರಿಂದ ಸಹಾಯಮಾಡುವಂತೆ ಕೇಳಿಕೊಂಡಿದ್ದೇನೆ. ಶೀಘ್ರ ಆರ್ಥಿಕ ಸಹಾಯ ಮಾಡಲಿದ್ದಾರೆ ಎಂದೂ ತಿಳಿಸಿದರು.


ರೈತರ ಅನುಕೂಲಕ್ಕಾಗಿ ಗಡಿಭಾಗ ಸಡಿಲ
90 ಪಾಸಿಟಿವ್ ಪ್ರಕರಣದಿಂದ 7ಕ್ಕೆ ಬಂದಿದೆ. ರೈತರಿಗೆ (Farmers) ಬೆಳೆದ ಬೆಳೆ ಮಾರಾಟಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಹೂವು, ತರಕಾರಿ ಹಾಗೂ ಇನ್ನಿತರ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಗಡಿಭಾಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಯಾವುದಕ್ಕೆ ಅವಕಾಶ ಕೊಡಬೇಕು ಎಂಬುದು ಇಂದು ನಿರ್ಧಾರವಾಗಲಿದೆ ಎಂದು ಸೋಮಶೇಖರ್ ತಿಳಿಸಿದರು.


ಶೀಘ್ರ ಆರೆಂಜ್ ಝೋನ್ 
ವಾರದಲ್ಲಿ ಮೈಸೂರು ಕೊರೋನಾ ಮುಕ್ತವಾಗುವ ಸಾಧ್ಯತೆ ಇದೆ. ಈಗಾಗಲೇ ಕೊರೋನಾ ಪಾಸಿಟಿವ್ ಪ್ರಕರಣ 7ಕ್ಕೆ ಬಂದಿದ್ದರಿಂದ ಆದಷ್ಟು ಬೇಗ ಶೂನ್ಯಕ್ಕೆ ಇಳಿಯಲಿದೆ. ಹೀಗಾಗಿ ರೆಡ್ ಝೋನ್ ನಿಂದ ಆರೆಂಜ್ ಝೋನ್ ಆಗಿ ಪರಿವರ್ತಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಶೀಘ್ರ ನಿರ್ಧಾರ ಹೊರಬೀಳಲಿದೆ. ಮುಂದೆ ಪರಿಸ್ಥಿತಿ ನೋಡಿಕೊಂಡು ಗ್ರೀನ್ ಝೋನ್ ಗೆ ತರುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.


ಬಳಿಕ ಮಾತನಾಡಿದ ನಗರಾಭಿವೃದ್ಧಿ ಸಚಿವರಾದ ಬಿ.ಎ. ಬಸವರಾಜು, ಸಚಿವರಾದ ಸೋಮಶೇಖರ್ ಅವರು ಮೃಗಾಲಯಕ್ಕೆ ಆರ್ಥಿಕ ಸಹಾಯ ಮಾಡುವಂತೆ ಕೇಳಿಕೊಂಡಾಗ ಸಂತೋಷದಿಂದ ಒಪ್ಪಿದೆ. ನನ್ನ ಕ್ಷೇತ್ರದ ಬಿಜೆಪಿ ಮುಖಂಡರು, ಜನಪ್ರತಿನಿಧಿಗಳು ಸಹ ಕೊಡುಗೆ ನೀಡಿದ್ದಾರೆ. ಹೀಗಾಗಿ 84 ಲಕ್ಷ ರೂ. ಸಂಗ್ರಹವಾಗಿದೆ. ಮನುಷ್ಯರಿಗೆ ಹಸಿವಾದರೆ ಹೇಳಿಕೊಳ್ಳಬಹುದು. ಆದರೆ, ಪ್ರಾಣಿಗಳಿಗೆ ಅದು ಸಾಧ್ಯವಿಲ್ಲ. ಹೀಗಾಗಿ ಅವುಗಳ ಹಸಿವು ನೀಗಿಸುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.