ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಲ್ಲಿ ತನಿಖೆ ಎದುರಿಸುತ್ತಿರುವ ಮತ್ತು ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ಬುಧವಾರ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಅವರು ಇವತ್ತೇ ದೆಹಲಿ ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಜಾರಿ ನಿರ್ದೇಶನಾಲಯದಲ್ಲಿ ಡಿ.ಕೆ. ಶಿವಕುಮಾರ್ ಪರ ವಾದ ಮಾಡಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತವರ ತಂಡವೇ ದೆಹಲಿ ಹೈಕೋರ್ಟಿನಲ್ಲಿ ಕಾನೂನು ಹೋರಾಟ ಮಾಡಲಿದ್ದು ಇಂದು ಅವರು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಈ ಸಂಬಂಧ ನಿನ್ನೆ ರಾತ್ರಿಯೇ ಅಭಿಷೇಕ್ ಮನು ಸಿಂಘ್ವಿ ಜೊತೆ ಡಿ.ಕೆ. ಶಿವಕುಮಾರ್ ಅವರ ಸಹೋದರ ಮತ್ತು ಸಂಸದ ಡಿ.ಕೆ. ಸುರೇಶ್ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.


ಕೆಳ ಹಂತದ ನ್ಯಾಯಾಲಯವಾದ ಜಾರಿ ನಿರ್ದೇಶನಾಲಯದ ಕೋರ್ಟಿನಲ್ಲಿ ಜಾಮೀನು ಸಿಗುವುದು ಕಷ್ಟ ಸಾಧ್ಯ ಎಂಬ ಸಂಗತಿ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರಿಗೆ ಗೊತ್ತಿತ್ತು. ಈ‌ ಹಿನ್ನೆಲೆಯಲ್ಲಿ ಕೆಳ‌ಹಂತದ ನ್ಯಾಯಾಲಯದ ಪ್ರಕ್ರಿಯೆಗಳು ಮುಗಿಯಲಿ ಎಂದು ಕಾಯುತ್ತಿದ್ದರು. ನಿನ್ನೆ ಜಾರಿ ನಿರ್ದೇಶನಾಲಯದ ನ್ಯಾಯಾಲಯ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಈಗ ಇಡಿ‌ ಕೋರ್ಟ್ ವಜಾಗೊಳಿಸಿದ ಆಧಾರದ ಮೇಲೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಲಾಗುತ್ತಿದೆ. ದೆಹಲಿ ಹೈಕೋರ್ಟಿನಲ್ಲಾದರೂ ಜಾಮೀನು ಸಿಗಬಹುದೆಂಬುದು ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರ ನಿರೀಕ್ಷೆ. ‌ಇಲ್ಲೂ ಆಗದಿದ್ದರೆ ಸುಪ್ರೀಂ ಕೋರ್ಟ್ ಕದ ತಟ್ಟುವುದು ಅವರಿಗೆ ಅನಿವಾರ್ಯವಾಗಲಿದೆ.