ನವದೆಹಲಿ: ಅಕ್ರಮ ಹಣ ವರ್ಗಾವಣೆ ಮತ್ತು ಬೇನಾಮಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದು ತಿಹಾರ್ ಜೈಲಿನಿಂದ ಹೊರ ಬಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಗುರುವಾರ ದೆಹಲಿಯಲ್ಲೇ ಬಿಡಾರ ಹೂಡಿ ಎಐಸಿಸಿ ಅಧ್ಯಕ್ಷೆ ಸೋನಿಯಾ‌ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ಅವರನ್ನು ಭೇಟಿ ಮಾಡಿದರು.


COMMERCIAL BREAK
SCROLL TO CONTINUE READING

ಜೈಲಿನಿಂದ ಹೊರ ಬಂದ ಬಳಿಕ ಡಿ.ಕೆ. ಶಿವಕುಮಾರ್ ಗುರುವಾರವೇ ಬೆಂಗಳೂರಿಗೆ ತೆರಳುತ್ತಾರೆ. ಅದಕ್ಕಾಗಿ ಬೆಂಗಳೂರಿನಲ್ಲಿ  ಸಂಭ್ರಮಾಚರಣೆ ತಯಾರಿಗಳು ನಡೆದಿದ್ದವು. ಆದರೆ ಡಿಕೆಶಿ ದೆಹಲಿಯಲ್ಲೇ ವಾಸ್ತವ್ಯ ಹೂಡಿದ ಮಧ್ಯಾಹ್ನದವರೆಗೂ ಮನೆಯಲ್ಲೇ ಇದ್ದು ಬೆಂಬಲಿಗರನ್ನು ಭೇಟಿ ಮಾಡಿದರು.‌ ಜೊತೆಗೆ ವಿಶ್ರಾಂತಿ ಪಡೆದರು.


ಡಿ.ಕೆ. ಶಿವಕುಮಾರ್ ಅವರು ತಂಗಿದ್ದ ಸಂಸದ ಹಾಗೂ ಅವರ ಸಹೋದರ ಡಿ.ಕೆ‌. ಸುರೇಶ್ ಅವರ ನಿವಾಸಕ್ಕೆ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ, ಆನೆಕಲ್ ಶಾಸಕ ಶಿವಣ್ಣ, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ, ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ, ಬೆಂಗಳೂರಿನ ಮಾಜಿ ಮೇಯರ್ ಗಳಾದ ಪದ್ಮಾವತಿ, ಸಂಪತ್ ರಾಜ್ ಹಾಗೂ ಮತ್ತಿತರ ಬೆಂಬಲಿಗರು, ಆಪ್ತರು ಭೇಟಿ ನೀಡಿ ಡಿ.ಕೆ. ಶಿವಕುಮಾರ್ ಅವರ ಕುಶಲೋಪಹರಿ ನಡೆಸಿದರು.


ಇದಾದ ಬಳಿಕ ನೇರವಾಗಿ ಎಐಸಿಸಿ ಕಚೇರಿಗೆ ತೆರಳಿದ ಡಿ.ಕೆ. ಶಿವಕುಮಾರ್, ಅಲ್ಲಿ ಕೆ.ಸಿ. ವೇಣುಗೋಪಾಲ್​ ಅವರನ್ನು ಭೇಟಿ ಮಾಡಿ ಅರ್ಧ ಗಂಟೆ ಸಮಾಲೋಚನೆ ನಡೆಸಿದರು. ಅಲ್ಲಿಂದ ಖಾಸಗಿ ಹೊಟೆಲ್ ಗೆ ತೆರಳಿ ವಕೀಲ ಮುಕುಲ್ ರೋಹ್ಟಗಿ ಭೇಟಿ ಮಾಡಿದರು. ಸಂಜೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನೂ 10 ಜನಪಥ್ ನಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಈ ಎಲ್ಲಾ ಸಂದರ್ಭದಲ್ಲಿ ಡಿ.ಕೆ. ಸುರೇಶ್ ಜೊತೆಗಿದ್ದರು.



ಸೋನಿಯಾ ಗಾಂಧಿ ಅವರ ಭೇಟಿ ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, 'ನಾನು ತಿಹಾರ್ ಜೈಲಿನಲ್ಲಿದ್ದಾಗ ಸೋನಿಯಾ ಗಾಂಧಿ ನನ್ನನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದರು. ಹೀಗಾಗಿ ಬಿಡುಗಡೆ ನಂತರ ಅವರನ್ನು ಭೇಟಿ ಮಾಡಿ ಗೌರವ ಸೂಚಿಸಿದ್ದೇನೆ. ಇದೇ ರೀತಿ ಕೆ.ಸಿ. ವೇಣುಗೋಪಾಲ್​ ಅವರನ್ನು ಕೂಡ ಭೇಟಿ ಮಾಡಿದ್ದೇನೆ. ಭೇಟಿ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಶುಕ್ರವಾರ ಬೆಂಗಳೂರಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಶನಿವಾರ ತೆರಳುತ್ತೇನೆ. ಸದ್ಯ ವಕೀಲ ಮುಕುಲ್ ರೋಹ್ಟಗಿ ಅವರನ್ನಷ್ಟೇ ಭೇಟಿಯಾಗಲು ಸಾಧ್ಯವಾಗಿದೆ. ಶುಕ್ರವಾರ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ನಮ್ಮ ಪಕ್ಷದ ಇತರೆ ನಾಯಕರನ್ನು ಭೇಟಿ ಮಾಡುವೆ ಎಂದರು.


ಅನರ್ಹ ಶಾಸಕರ ಮತ್ತು ಬೇರೆ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಲು ನಿರಾಕರಿಸಿದ ಡಿ.ಕೆ. ಶಿವಕುಮಾರ್, ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಚೇತರಿಕೆ ಕಂಡಿದೆ ಎಂದಷ್ಟೇ ಹೇಳಿದರು.