ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಪೂರ್ಣಗೊಳಿಸುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್
ನಮ್ಮ ರೈತರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಾಗ್ದಾನ ನೀಡಿದರು.
ಮೈಸೂರು : ನಮ್ಮ ರೈತರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಾಗ್ದಾನ ನೀಡಿದರು. ಮೇಕೆದಾಟು ಬಗ್ಗೆ ಕಾಂಗ್ರೆಸ್ ಸರ್ಕಾರ ಚಿಂತನೆ ಮಾಡುತ್ತಿಲ್ಲ ಎಂದು ಮಾಜಿ ಪ್ರಧಾನಿಗಳಾದ ದೇವೇಗೌಡರು ಹೇಳಿದ್ದಾರೆ. ದೇವೇಗೌಡರೇ ನೀವು ಮತ್ತು ಪ್ರಧಾನಿ ಮೋದಿ ಅವರು ಆತ್ಮೀಯರಿದ್ದೀರಿ, ಅವರ ಬಳಿ ಮಾತನಾಡಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ ಎಂದು ಹೇಳಿದರು.
ಕಾವೇರಿ ನದಿ ನಮ್ಮ ತಾಯಿ, ಈ ತಾಯಿಯ ಕೃಪೆಯಿಂದ ನಾವೆಲ್ಲಾ ಬದುಕಿದ್ದೇವೆ. ಆದರೂ ಈ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 26 ಜನ ಬಿಜೆಪಿ ಎಂಪಿಗಳು ರಾಜ್ಯದ ಪರವಾಗಿ ಮಾತನಾಡುತ್ತಿಲ್ಲ. ಪ್ರತಾಪ್ ಸಿಂಹ ಅವರು ಪ್ರಧಾನಿಗಳಿಗೆ ಹೇಳಿ ಅನುಮತಿ ಕೊಡಿಸಬಹುದಲ್ಲವೇ? ಆದರೂ ಯಾರೂ ದನಿ ಎತ್ತುತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಏನೂ ಕೆಲಸ ಮಾಡುತ್ತಿಲ್ಲ ಎಂದು ದೇವೇಗೌಡರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಮೇಕೆದಾಟು ಪರವಾಗಿ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದವರಿಗೆ ಅಣೆಕಟ್ಟು ನಿರ್ಮಾಣ ಮಾಡಲು ಅಡ್ಡಿಪಡಿಸಬಾರದು ಎಂದು ಹೇಳಿದರು.
ಮೇಕೆದಾಟು ಯೋಜನೆಯಿಂದ ಮುಳುಗಡೆಯಾಗುವ ಅರಣ್ಯ ಪ್ರದೇಶಗಳ ಬದಲಾಗಿ ಕಂದಾಯ ಭೂಮಿಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗುವುದು. ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಮರಗಳ ಎಣಿಕೆ ಕಾರ್ಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ರೈತರಿಗೆ ಸಿಹಿಸುದ್ದಿ; ತುಮಕೂರಿನಲ್ಲಿ ಕೊಬ್ಬರಿ ಕೇಂದ್ರಕ್ಕೆ ಶೋಭಾ ಕರಂದ್ಲಾಜೆ ಚಾಲನೆ
ಮೇಕೆದಾಟು ಯೋಜನೆಯಿಂದ ಸುಮಾರು 66 ಟಿಎಂಸಿ ನೀರು ಸಂಗ್ರಹಿಸಬಹುದು. ಹಾರಂಗಿ, ಕಬಿನಿ, ಕೆಆರ್ಎಸ್, ಹೇಮಾವತಿ ಜಲಾಶಯಗಳಲ್ಲಿ ನೀರು ಇಲ್ಲದಿದ್ದಾಗ ಮೇಕೆದಾಟುವಿನಲ್ಲಿ ಸಂಗ್ರಹವಾದ ನೀರನ್ನು ತಮಿಳುನಾಡಿಗೆ ನೀಡಿ, ನಮ್ಮ ರೈತರನ್ನು ಬದುಕಿಸಬಹುದು ಎಂದು ಕಾವೇರಿ ತಾಯಿಯನ್ನು ಪೂಜಿಸಿ ಮೇಕೆದಾಟು ಪಾದಯಾತ್ರೆ ಹೊರಟೆವು ಎಂದರು.
"ನಮ್ಮ ನೀರು, ನಮ್ಮ ಹಕ್ಕು" ಎಂದು ಸಂಗಮದಿಂದ, ಬೆಂಗಳೂರಿಗೆ ಹೆಜ್ಜೆ ಹಾಕಿದೆವು. ಪಾದಯಾತ್ರೆ ವೇಳೆ ನಮ್ಮ ಮೇಲೆ ಅನೇಕ ಪ್ರಕರಣಗಳನ್ನು ದಾಖಲಿಸಿದರು. ನಮ್ಮ ಹೋರಾಟ ನೋಡಿ ಬೊಮ್ಮಾಯಿ ಅವರು 1 ಸಾವಿರ ಕೋಟಿ ರೂ. ಮೀಸಲಿಟ್ಟರು. ಆದರೆ ಈ ಹಣ ಏನಾಯಿತು? ಈ ವಿಚಾರವಾಗಿ ಬಿಜೆಪಿಯವರನ್ನು ಜೆಡಿಎಸ್ ಏಕೆ ಪ್ರಶ್ನಿಸುತ್ತಿಲ್ಲ? ಎಂದು ಕೇಳಿದರು.
2018 ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲೇ ಗುದ್ದಲಿಪೂಜೆಯಾದ ಮುತ್ತಿನಮುಳುಸೋಗೆ ಏತ ನೀರಾವರಿ ಯೋಜನೆ ನಮ್ಮಿಂದಲೇ ಉದ್ಘಾಟನೆಯಾಗುತ್ತಿದೆ. ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿ ಮಾಡಿದ ಕಾಂಗ್ರೆಸ್ ಸದಾ ರೈತಪರವಾಗಿ ಕೆಲಸ ಮಾಡುತ್ತದೆ. ರೈತನಿಗೆ ಸಂಬಳ, ವರ್ಗಾವಣೆ, ಬಡ್ತಿ, ನಿವೃತ್ತಿ, ಪಿಂಚಣಿ ಸೇರಿದಂತೆ ಯಾವ ಸೌಲಭ್ಯವೂ ಇಲ್ಲ. ಆದ ಕಾರಣ ಎಲ್ಲಾ ಸರ್ಕಾರಗಳು ರೈತರ ಪರ ನಿಲ್ಲಬೇಕು ಎಂದರು.
ರೈತರ ಏಳಿಗೆಗೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾನು, ಎಚ್.ಸಿ.ಮಹದೇವಪ್ಪ, ಬೋಸರಾಜು ಸೇರಿದಂತೆ ಎಲ್ಲರೂ ಶ್ರಮಿಸುತ್ತೇವೆ. ರೈತರ ಬೆನ್ನಿಗೆ ನಿಲ್ಲಲು ಸಚಿವರಾದ ವೆಂಕಟೇಶ್ ಅವರು ಅನೇಕ ಪ್ರಸ್ತಾವನೆಗಳನ್ನು ಸಲ್ಲಿಸಿದ್ದಾರೆ. ರೈತರ ಏಳ್ಗೆಗೆ, ಪಿರಿಯಾಪಟ್ಟಣ ಭಾಗದ ನೀರಿನ ಬವಣೆ ನಿವಾರಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಕಳೆದ 40 ವರ್ಷಗಳಲ್ಲೇ ಅತ್ಯಂತ ಹೆಚ್ಚು ಬಹುಮತವನ್ನು ಕರ್ನಾಟಕದ ಜನ ನೀಡಿದ್ದಾರೆ. ಮೈಸೂರು ಭಾಗದಲ್ಲೂ ನಮ್ಮ ಪಕ್ಷ ಉತ್ತಮ ಸಾಧನೆ ಮಾಡಿದೆ. 136 ಜನ ಶಾಸಕರನ್ನು, ಇಲ್ಲಿನ ಶಾಸಕ ವೆಂಕಟೇಶ್ ಅವರನ್ನು ಆಯ್ಕೆ ಮಾಡಿದ ಪಿರಿಯಾಪಟ್ಟಣ ಮತ್ತು ಕರ್ನಾಟಕದ ಜನತೆಗೆ ಋಣಿಯಾಗಿರುತ್ತೇವೆ ಎಂದರು.
ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಬಿಜೆಪಿ- ಜನತಾ ದಳದವರು ಏನು ಬೇಕಾದರೂ ಮಾತನಾಡಲಿ. ಏಕೆಂದರೆ ಎರಡೂ ಪಕ್ಷಗಳು ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ನಮ್ಮ ಶಕ್ತಿ ನೋಡಿ ಕಮಲ ಉದುರಿ ಹೋಯಿತು, ಮಹಿಳೆ ತೆನೆ ಎಸೆದು ಹೋದಳು. ಅದಕ್ಕೆ ದಳದವರ ಜೊತೆ ಬಿಜೆಪಿಯವರು ಸೇರಿಕೊಂಡಿದ್ದಾರೆ. ಜನತಾದಳದವರು ಬಿಜೆಪಿಯ ವಕ್ತಾರರಾಗಿದ್ದಾರೆ ಎಂದರು.
ಇದನ್ನೂ ಓದಿ: ಸಹಕಾರಿ ಸಂಸ್ಥೆಗಳ ಮಧ್ಯಮಾವಧಿ-ದೀರ್ಘಾವಧಿ ಕೃಷಿ ಸಾಲ; ಬಡ್ಡಿ ಮನ್ನಾ ಮಾಡಿ ಸರ್ಕಾರದ ಆದೇಶ
ನಮ್ಮ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ಸಮೃದ್ಧವಾಗಿದೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ನೋಡಿ ಪ್ರಧಾನಿ ಮೋದಿ ಅವರೇ ʼಮೋದಿ ಗ್ಯಾರಂಟಿʼ ಎಂದು ಜಾಹೀರಾತು ನೀಡುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿದ್ದವರು, ದಿವಾಳಿಯಾಗುತ್ತದೆ ಎಂದು ಹೇಳುತ್ತಿದ್ದವರೇ ಈಗ ಗ್ಯಾರಂಟಿ ಯೋಜನೆಗಳ ಹಿಂದೆ ಬಿದ್ದಿದ್ದಾರೆ. ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ, ಉಚಿತ ವಿದ್ಯುತ್ ಗೃಹಜ್ಯೋತಿ ಯೋಜನೆ ಪ್ರತಿಯೊಬ್ಬರ ಮನೆ ತಲುಪಿದೆ. 1.4 ಕೋಟಿ ಮಹಿಳೆಯರ ಖಾತೆಗೆ ಲಕ್ಷ್ಮಿ ತಲುಪಿದ್ದಾಳೆ. ಯುವನಿಧಿ ಮೂಲಕ ಯುವ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ಜನರ ಬದುಕಿನಲ್ಲಿ ಬದಲಾವಣೆ ಆಗುತ್ತಿದೆ ಎಂದರು.
ನಮಗೆ ಭಾವನೆಗಳಿಗಿಂತ ಜನರಿಗೆ ಬದುಕು ಮುಖ್ಯ. ಕೆಲವೊಬ್ಬರು ಭಾವನೆಯ ಮೇಲೆ ರಾಜಕೀಯ ಮಾಡಲು ಹೊರಟಿದ್ದಾರೆ. ನಾವೇನೂ ಹಿಂದೂಗಳಲ್ಲವೇ, ಆಂಜನೇಯ ನಮ್ಮ ದೇವರಲ್ಲವೇ?, ನಮಗೆಲ್ಲಾ ದೇವರ ಮೇಲೆ ನಂಬಿಕೆ ಇಲ್ಲವೇ? ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮನಿದ್ದಾನೆ, ನನ್ನ ಹೆಸರಿನಲ್ಲಿ ಶಿವ, ವೆಂಕಟೇಶ್ ಅವರ ಹೆಸರಿನಲ್ಲಿ ವೆಂಕಟೇಶ, ಶಿವನ ಅವತಾರ ಮಹದೇವನ ಹೆಸರಿನ ಹೆಚ್.ಸಿ. ಮಹದೇವಪ್ಪ ಇಲ್ಲವೇ?, ನಾವೇನೂ ಹಿಂದೂಗಳಲ್ಲವೇ? ನಮ್ಮೆಲ್ಲರ ಬದುಕಿಗೆ ನಮ್ಮದೇ ಆದ ವಿಚಾರ ಇರುತ್ತದೆ ಎಂದರು.
ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೆ, ಪೂಜೆ ನೂರಾದರೂ ಭಕ್ತಿವೊಂದೇ, ಕರ್ಮ ಹಲವಾದರೂ ನಿಷ್ಠೆವೊಂದೇ, ದೇವನೊಬ್ಬ ನಾಮ ಹಲವು.ನಾವು ನೂರಾರು ದೇವರನ್ನು ಪೂಜೆ ಮಾಡಿಕೊಂಡು ಬಂದಿದ್ದೇವೆ. ಸಿದ್ದರಾಮಯ್ಯ ಅವರ ಅಕ್ಕಿಗೆ ಅರಿಶಿನ ಬೆರೆಸಿದರೆ ಅದೇ ಮಂತ್ರಾಕ್ಷತೆ ಎನ್ನುತ್ತಿದ್ದಾರೆ. ಜನರ ಹಸಿವಿಗೆ "ಅನ್ನಭಾಗ್ಯ"ವೇ ಮಂತ್ರಾಕ್ಷತೆ, ನಿರುದ್ಯೋಗಕ್ಕೆ "ಯುವನಿಧಿ"ಯೇ ಮಂತ್ರಾಕ್ಷತೆ, ಮಹಿಳೆಯರ ಕಷ್ಟಕ್ಕೆ "ಗೃಹಲಕ್ಷ್ಮಿ"ಯೇ ಮಂತ್ರಾಕ್ಷತೆ, ಮಹಿಳೆಯರ ಪ್ರಯಾಣಕ್ಕೆ "ಶಕ್ತಿ"ಯೇ ಮಂತ್ರಾಕ್ಷತೆ, ಮನೆಯ ಬೆಳಕಿಗೆ "ಗೃಹಜ್ಯೋತಿ"ಯೇ ಮಂತ್ರಾಕ್ಷತೆ" ಎಂದರು.
ಮಾತೃಭಾಷೆ ಕನ್ನಡ ಬೆಳೆಯಬೇಕು, ಉಳಿಯಬೇಕು ಎಲ್ಲರ ನಾಲಿಗೆಯಲ್ಲೂ ಕನ್ನಡ ನಲಿದಾಡಬೇಕು ಎಂದು ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡಲಾಗಿದೆ. ಸಂವಿಧಾನದ ಪೀಠಿಕೆಯನ್ನು ಪ್ರತಿ ಶಾಲೆಗಳಲ್ಲಿ ಓದುವಂತೆ ಮಾಡಿದ್ದೇವೆ. ನಾವು ನುಡಿದಂತೆ ನಡೆಯುತ್ತೇವೆ. ಇನ್ನೂ ನೂರಾರು ಯೋಜನೆಗಳನ್ನು ಜನರ ಕಲ್ಯಾಣಕ್ಕೆ ಜಾರಿ ಮಾಡುತ್ತೇವೆ. ನಮಗೆ ಅಧಿಕಾರ ಕೊಟ್ಟ ಜನರ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.