ನವದೆಹಲಿ: ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದು ಮಾಡಲು ಕೋರಿ ಮತ್ತು ಬೆಂಗಳೂರಿನಲ್ಲಿ ವಿಚಾರಣೆ ನಡೆಸುವಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಪತ್ನಿ ಉಷಾ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ದೆಹಲಿ ಹೈಕೋರ್ಟಿನಲ್ಲಿ ನಡೆಯಲಿದೆ.


COMMERCIAL BREAK
SCROLL TO CONTINUE READING

ಕಳೆದ ಸೋಮವಾರ ಗೌರಮ್ಮ ಮತ್ತು ಉಷಾ ಅವರ ಅರ್ಜಿಯನ್ನು ಕೈಗೆತ್ತಿಕೊಂಡ ದೆಹಲಿ ಹೈ ಕೋರ್ಟಿನ ನ್ಯಾಯಾಧೀಶ ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠದ ಮುಂದೆ ಮೊದಲಿಗೆ ಜಾರಿ ನಿರ್ದೇಶನಾಲಯದ ವಕೀಲರು ಹಾಜರಿರಲಿಲ್ಲ. ಪ್ರಕರಣದ ವಿಚಾರಣೆಯನ್ನು ಪಾಸ್ ಓವರ್ ಮಾಡಿ ಬೇರೆ ಪ್ರಕರಣಗಳನ್ನು  ವಿಚಾರಣೆ ನಡೆಸಲಾಯಿತು. ಬಳಿಕ ಸಮಯದ ಅಭಾವದಿಂದ ಗೌರಮ್ಮ ಮತ್ತು ಉಷಾ ಅವರ ಅರ್ಜಿಗಳನ್ನು ಅಕ್ಟೋಬರ್ 24ಕ್ಕೆ ವಿಚಾರಣೆ ನಡೆಸಲಾಗುವುದು ಎಂದು ಹೇಳಲಾಗಿತ್ತು. ಆ ವಿಚಾರಣೆ ಇಂದು ನಡೆಯಲಿದೆ.


ಕಳೆದ ವಾರ ನಡೆಸಿದ್ದ ವಿಚಾರಣೆ ವೇಳೆ ನ್ಯಾಯಪೀಠವು ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ತಡೆ ನೀಡಿ ಏಳು ದಿನಗಳ ಬಳಿಕ ಹೊಸ ಸಮನ್ಸ್ ನೀಡದಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚನೆ ನೀಡಿತ್ತು. ಸೋಮವಾರ ಗೌರಮ್ಮ ಮತ್ತು ಉಷಾ ಅವರನ್ನು ಬೆಂಗಳೂರಿನಲ್ಲಿ ವಿಚಾರಣೆ ನಡೆಸಬೇಕೋ ಅಥವಾ ದೆಹಲಿಯ ಇಡಿ ಮುಖ್ಯ ಕಚೇರಿಯಲ್ಲಿ ವಿಚಾರಣೆ ನಡೆಸಬೇಕೋ ಎಂಬ ಬಗ್ಗೆ ನಿರ್ಧರಿಸಬೇಕಿತ್ತು. ಗೌರಮ್ಮ ಮತ್ತು ಉಷಾ ಅವರ ಪರ ವಕೀಲರು ಸಿ ಆರ್ ಪಿ ಸಿ 160ರ ಪ್ರಕಾರ ಪುರುಷರನ್ನು ಮಾತ್ರ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಸಬೇಕು. ಈ ಕಾನೂನಿನಲ್ಲಿ ಮಹಿಳೆಯರ ವಿಚಾರಣೆ ನಡೆಸುವ ಬಗ್ಗೆ ಸ್ಪಷ್ಟೀಕರಣ ಇಲ್ಲ. ಜೊತೆಗೆ ಗೌರಮ್ಮ ಅವರಿಗೆ 85 ವರ್ಷ ವಯಸ್ಸಾಗಿದ್ದು ಅವರು ವಿಚಾರಣೆಗಾಗಿ ದೆಹಲಿಗೆ ಬರಲು ಸಾಧ್ಯವಿಲ್ಲ. ಆದುದರಿಂದ ಅವರನ್ನು ಬೆಂಗಳೂರಿನಲ್ಲೇ ವಿಚಾರಣೆ ನಡೆಸಲು ಅನುವು ಮಾಡಬೇಕು ಎಂದು ನ್ಯಾಯಪೀಠದೆದುರು ಮನವಿ ಮಾಡಿಕೊಂಡಿದ್ದರು.