ರಾಮನಗರ: ರಾಮನಗರದಲ್ಲಿ ನಡೆದ ಕಾರ್ಯಕ್ರಮದ ವೇಳೆ ಸಚಿವ, ಸಂಸದರ ನಡುವೆ ದೊಡ್ಡ ಗಲಾಟೆಯೇ ನಡೆದಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲಿಯೇ ಬಿಜೆಪಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ಎದೆ ಉಬ್ಬಿಸಿಕೊಂಡು ಜೋರು ಜಗಳವಾಡಿಕೊಂಡಿದ್ದಾರೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಜರಿದ್ದರು. ಆದರೆ ಇದೇ ವೇಳೆ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ಕಿತ್ತಾಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

 ಸಚಿವ ಅಶ್ವತ್ಥ್ ನಾರಾಯಣ ಭಾಷಣಕ್ಕೆ ಸಂಸದ ಡಿ.ಕೆ.ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ನಮ್ಮ ಕಾಲದಲ್ಲಿಯೇ ಅಡಿಗಲ್ಲು, ನಮ್ಮ ಕಾಲದಲ್ಲಿಯೇ ಉದ್ಘಾಟನೆ’, ‘ನಮ್ಮ ಸರ್ಕಾರದಲ್ಲಿ ಬೇರೆ ಸರ್ಕಾರದ ರೀತಿ ಅಲ್ಲ’ವೆಂದು ಅಶ್ವತ್ಥ್ ನಾರಾಯಣ ಭಾಷಣ ಮಾಡಿದ್ದಾರೆ. ರಾಜ್ಯದಲ್ಲಿನ ನೀರಾವರಿ ಯೋಜನೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ನಾವು ನಮ್ಮ ಅಭಿವೃದ್ಧಿಯನ್ನಷ್ಟೇ ಮಾಡಿಕೊಳ್ಳಲ್ಲ, ರಾಜ್ಯದ ಅಭಿವೃದ್ಧಿಯನ್ನು ಮಾಡುತ್ತೇವೆಂದು ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಇದಕ್ಕೆ ಡಿ.ಕೆ.ಸುರೇಶ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅಶ್ವತ್ಥ್ ನಾರಾಯಣ ಮತ್ತು ಡಿ.ಕೆ.ಸುರೇಶ್ ನಡುವೆ ಕಾರ್ಯಕ್ರಮದ ವೇದಿಕೆಯಲ್ಲಿಯೇ ಪರಸ್ಪ ವಾಕ್ಸಮರ ನಡೆದಿದೆ. ಈ ವೇಳೆ ಅಶ್ವತ್ಥ್ ನಾರಾಯಣ ಬಳಿಯಿದ್ದ ಮೈಕ್ ಅನ್ನು ಎಂಎಲ್​ಸಿ ರವಿ ಹಿಡಿದು ಎಳೆದಾಡಿದ್ದಾರೆ.


ಇದನ್ನೂ ಓದಿ: Corona Vaccine:ಮಕ್ಕಳ ಲಸಿಕಾ ಅಭಿಯಾನಕ್ಕೆ ಸಿಎಂ ಚಾಲನೆ, ಟಫ್ ರೂಲ್ಸ್‌ ಜಾರಿ ಬಗ್ಗೆ ಸುಳಿವು ನೀಡಿದ ಬೊಮ್ಮಾಯಿ


ಕಾರ್ಯಕ್ರಮದಲ್ಲಿ ನಡೆದಿದ್ದೇನು..?


ರಾಮನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಸಂಸದ ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ಪರ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದ್ದರು. ಈ ವೇಳೆ ಭಾಷಣ ಮಾಡುತ್ತಿದ್ದ ಸಚಿವ ಡಾ.ಅಶ್ವತ್ಥ್ ನಾರಾಯಣ, ‘ಒಬ್ಬ ಮುಖ್ಯಮಂತ್ರಿ ಬಂದಾಗ ನಮ್ಮ ಜಿಲ್ಲೆಯ ಗೌರವವವನ್ನು ಈ ರೀತಿ ಹಾಳು ಮಾಡುವುದಕ್ಕೆ ಈ ರೀತಿ ಕೂಗುವುದಾ? ಘೋಷಣೆ ಕೂಗುವುದಾ..? ಯಾರಪ್ಪ ಗಂಡು..? ಕೆಲಸದಲ್ಲಿ ತೋರಿಸಿ. ಯಾರೋ ನಾಲ್ಕು ಜನರನ್ನು ಕರೆದುಕೊಂಡು ಬಂದು ಕಾರ್ಯಕ್ರಮದಲ್ಲಿ ಗಲಾಟೆ ಮಾಡೋದಾ? ನೀವು ಏನು ಕೆಲಸ ಮಾಡಿದ್ದೀರಿ ಎಂದು ತೊಡೆತಟ್ಟಿ ಹೇಳಿ ನೋಡೋಣ..? ನಾವು ಏನು ಮಾಡಿದ್ದೇವೆಂದು ಧರ್ಯವಾಗಿ ಹೇಳುತ್ತೇವೆ. ಈ ಜಿಲ್ಲೆಗೆ ವಂಚನೆ ಮಾಡಲು ಬಂದಿಲ್ಲ ನಾವು. ಜನರ ಮತ ತೆಗೆದುಕೊಲ್ಳಲು ಬಂದಿಲ್ಲ ನಾವು. ಜನರ ವಿಶ್ವಾಸ ಗಳಿಸಿ ಸೇವೆ ಸಲ್ಲಿಸಲು ಬಂದಿದ್ದೇವೆ ಅಂತಾ ಹೇಳಿದರು.


ಮುಂದುವರಿದು ಜೀವನಪರ್ಯಂತ ಕೇವಲ ಅಧಿಕಾರ… ಅಧಿಕಾರವೆನ್ನುವವರ ಮಧ್ಯೆ ಜನರ ಸೇವೆ ಮಾಡಲು ನಮ್ಮ ಸರ್ಕಾರ ಬಂದಿದೆ. ಜನಪರವಾಗಿ ಕೆಲಸ ಮಾಡುವವರನ್ನು ನಾಯಕ ಎನ್ನುತ್ತಾರೆ. ನಮಗೆ ನಾವು ಕೆಲಸ ಮಾಡಿಕೊಳ್ಳುವವರನ್ನು ಏನಂತಾರೆ..? ಸಿಎಂ ಬಂದಾಗ ಅವರಿಗೆ ಅಗೌರವ ತೋರಿಸುತ್ತೀರಾ? ಸಿಎಂ ಸಹಕಾರ ಕೊಡಲು ಬಂದಿದ್ದಾರೆ, ರಾಜಕಾರಣಕ್ಕೆ ಅಲ್ಲ. ರಾಮನಗರ ಜಿಲ್ಲೆಯಲ್ಲಿ ನಮ್ಮ ಪ್ರತಿನಿಧಿ ಇಲ್ಲದಿದ್ದರೂ ಅಭಿವೃದ್ಧಿಯಿಂದ ಕೈಬಿಟ್ಟಿಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿದರು.  


ಇದನ್ನೂ ಓದಿಕೊಟ್ಟ ಕುದುರೆ ಏರದೇ ಮತ್ತೊಂದು ಕುದುರೆ ಬಯಸುವವ ವೀರನೂ ಅಲ್ಲ, ಧೀರನೂ ಅಲ್ಲ: ಬಿಜೆಪಿ


ವೇದಿಕೆಯಲ್ಲೇ ಸಂಸದ ಡಿ.ಕೆ.ಸುರೇಶ್ ಧರಣಿ


ಘಟನೆ ಬಳಿಕ ಸಂಸದ ಡಿ.ಕೆ.ಸುರೇಶ್ ವೇದಿಕೆಯಲ್ಲೇ ಧರಣಿ ಕುಳಿತರು. ನೋಡ ನೋಡುತ್ತಲೇ ವೇದಿಕೆ ಕೆಳಗೂ ಗಲಾಟೆ ಶುರುವಾಗಿತ್ತು‌. ಈ ಸಂದರ್ಭದಲ್ಲಿ ಸಿಎಂ  ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿದರು. ‘ರಾಜಕೀಯ ಇದ್ದದ್ದೇ, ಆದರೆ ನಾವೆಲ್ಲಾ ಜನಪರ ಕೆಲಸ ಮಾಡಬೇಕೇ ಹೊರತು ಭಿನ್ನಾಭಿಪ್ರಾಯ ದೊಡ್ಡದು ಮಾಡಬಾರದು’ ಅಂತಾ ಇಬ್ಬರಿಗೂ ಕಿವಿಮಾತು ಹೇಳಿದರು. ಅಷ್ಟೊತ್ತಿಗಾಗಲೇ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದರು. ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡವಾಗಿದೆ‌.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.