ತಮ್ಮ ಮನೆಯ ಮಹಿಳೆಯರಿಗೂ ಬಿಜೆಪಿ ನಾಯಕರು ಗೌರವ ಕೊಡುವುದಿಲ್ಲ : ಡಿ.ಕೆ. ಸುರೇಶ್
ಸಿ.ಟಿ. ರವಿ ಆಡಿರುವ ಮಾತು, ನಡೆದುಕೊಂಡಿರುವ ರೀತಿ, ಪದೇ ಪದೆ ಹೆಣ್ಣು ಮಕ್ಕಳ ಬಗ್ಗೆ ಆಡಿರುವ ಮಾತು ಬಿಜೆಪಿಗೆ ಶೋಭೆ ತರುತ್ತದೆಯೇ? ಸಂಸ್ಕೃತಿ ಬಗ್ಗೆ ಮಾತನಾಡುತ್ತಾ ಜನರ ಮುಂದೆ ಬರುವ ಬಿಜೆಪಿಗರಿಗೆ ಆ ಸಂಸ್ಕೃತಿ ಎಲ್ಲಿ ಹೋಯ್ತು? ಆರ್ ಎಸ್ ಎಸ್ ಹೇಳಿಕೊಡುವ ಸಂಸ್ಕೃತಿ ಇದೇನಾ? ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಕಿಡಿಕಾರಿದರು.
ಬೆಂಗಳೂರು : ಬಿಜೆಪಿಯ ಅನೇಕ ನಾಯಕರು ಮಹಿಳೆಯರ ಬಗ್ಗೆ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ, ಅವರ ಕುಟುಂಬದಲ್ಲಿನ ಹೆಣ್ಣು ಮಕ್ಕಳಿಗೆ ತಾಯಿಗೆ, ಮಡದಿಗೂ ಗೌರವ ನೀಡುವುದಿಲ್ಲ ಎನಿಸುತ್ತದೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಸುರೇಶ್ ಅವರು ಭಾನುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಸಿ.ಟಿ. ರವಿ ಅವರ ಬಂಧನ ಹಾಗೂ ಅವರ ಆರೋಪಗಳ ಬಗ್ಗೆ ಕೇಳಿದಾಗ, ಬಿಜೆಪಿಯವರು ಸಿಬಿಐ ಸಂಸ್ಥೆಯನ್ನು ತಮ್ಮ ಮನೆ ಸರಕಿನಂತೆ ಭಾವಿಸಿದ್ದಾರೆ. ಮನೆಗೆಲಸದವರನ್ನು ಬಳಸಿಕೊಂಡಂತೆ ಸಿಬಿಐ ಬಳಸಿಕೊಳ್ಳುವ ಪ್ರವೃತ್ತಿ ಎದ್ದು ಕಾಣುತ್ತಿದೆ. ಸಿ.ಟಿ. ರವಿ ಆಡಿರುವ ಮಾತು, ನಡೆದುಕೊಂಡಿರುವ ರೀತಿ, ಪದೇ ಪದೆ ಹೆಣ್ಣು ಮಕ್ಕಳ ಬಗ್ಗೆ ಆಡಿರುವ ಮಾತು ಬಿಜೆಪಿಗೆ ಶೋಭೆ ತರುತ್ತದೆಯೇ? ಎಂದು ಪ್ರಶ್ನಿಸಿದರು.
ಸಂಸ್ಕೃತಿ ಬಗ್ಗೆ ಮಾತನಾಡುತ್ತಾ ಜನರ ಮುಂದೆ ಬರುವ ಬಿಜೆಪಿಗರಿಗೆ ಆ ಸಂಸ್ಕೃತಿ ಎಲ್ಲಿ ಹೋಯ್ತು? ಆರ್ ಎಸ್ ಎಸ್ ಹೇಳಿಕೊಡುವ ಸಂಸ್ಕೃತಿ ಇದೇನಾ? ಬಿಜೆಪಿ ನಾಯಕರು ನಿರಂತರವಾಗಿ ಮಹಿಳೆಯರ ಜತೆ ನಡೆದುಕೊಳ್ಳುವ ರೀತಿ ನೀತಿಯನ್ನು ರಾಜ್ಯದ ಜನ ಗಮನಿಸಬೇಕು ಎಂದರು. ಅಲ್ಲದೆ, ಬಿಜೆಪಿ ನಾಯಕರಿಗೆ ಸಂಸ್ಕೃತಿ ಬಗ್ಗೆ ಪಾಠ ಮಾಡುವ ಆರ್ ಎಸ್ ಎಸ್ ನವರು ಈಗಲಾದರೂ ಅವರಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಸದನದಲ್ಲಿ ಏನೇ ತಪ್ಪಾಗಿದ್ರು ಸಭಾಧ್ಯಕ್ಷರು ನೋಡಿಕೊಳ್ಳುತ್ತಾರೆ
ರವಿ ಅವರ ಹೇಳಿಕೆಯನ್ನು ಬಿಜೆಪಿಯ ಯಾವುದೇ ನಾಯಕನ ಬಳಿ ಖಂಡಿಸಲು ಮಾತುಗಳು ಇಲ್ಲ. ಹೆಣ್ಣಿನ ಕುಲಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸದಿದ್ದಾಗ ಮಾಧ್ಯಮ ಸ್ನೇಹಿತರು ಅವರಿಗೆ ಬೆಂಬಲ ನೀಡುವುದೇಕೆ? ಅವರ ಮಾತುಗಳ ಬಗ್ಗೆ ಮಾಧ್ಯಮಗಳ ಬಳಿ ದಾಖಲೆಗಳು ಇದ್ದರೂ ಮಾಧ್ಯಮಗಳು ಬೇರೆ ವಿಚಾರಗಳನ್ನು ಪ್ರಚಾರಕ್ಕೆ ಬಿಡುತ್ತಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡಿಗರು ಸುಸಂಸ್ಕೃತರು ಎಂಬ ಭಾವನೆ ದೇಶದಲ್ಲಿದೆ. ವಿರೋಧ ಪಕ್ಷಗಳ ನಾಯಕರು ಪದೇ ಪದೆ ಮಹಿಳೆಯರ ವಿರುದ್ಧ ಧೋರಣೆ ಅನುಸರಿಸುತ್ತಿರುವುದರಿಂದ ರಾಜ್ಯದ ಗೌರವ ಕಡಿಮೆಯಾಗುವುದಿಲ್ಲವೇ? ಕಳೆದ ಹತ್ತು ವರ್ಷಗಳಿಂದ ಮಹಿಳೆಯರ ಮೇಲೆ ಬಿಜೆಪಿ ನಾಯಕರ ಉಪಟಳಗಳು ಹೆಚ್ಚಾಗಿವೆ. ಇದೆಲ್ಲವನ್ನು ನೋಡಿದಾಗ, ಮೌಲ್ಯಗಳು ಕುಸಿಯುತ್ತಿವೆ, ಓಲೈಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಜನಪ್ರತಿನಿಧಿಗಳು ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ:ನಿಗದಿತ ಪ್ರಯಾಣ ದರಕ್ಕಿಂತ ಹೆಚ್ಚಿನ ಹಣಕ್ಕೆ ಡ್ರೈವರ್ ಕ್ಯಾತೆ
ಮಾಧ್ಯಮಗಳು ನೀಚ ಹೇಳಿಕೆ ಖಂಡಿಸುತ್ತಿಲ್ಲ : ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ಎಂದು ಹೇಳಿದ್ದೆ ಇಷ್ಟೆಲ್ಲದಕ್ಕೂ ಕಾರಣವಾಯಿತೇ ಎಂದು ಕೇಳಿದಾಗ, ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ಎಂದಿದ್ದು ಆಯಿತು, ಅವರನ್ನು ಕೊಲೆಗಾರ ಎಂದಿದ್ದು ಆಯಿತು, ಅವರು ಮತ್ತೆ ನೀಚ ಪದ ಬಳಸಿದ್ದು ಆಯಿತು. ಮಾಧ್ಯಮಗಳ ಸ್ನೇಹಿತರು ಯಾವುದನ್ನು ಖಂಡಿಸುತ್ತಿಲ್ಲ. ನೀವೆಲ್ಲರೂ ಚರ್ಚೆ ಮಾಡುತ್ತಿರುವುದು ರವಿ ಅವರ ಬಂಧನದ ವಿಚಾರವನ್ನು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರೋಪ ಮಾಡುವುದು, ಮಾತು ತಿರುಚುವುದರಲ್ಲಿ ನಿಪುಣ: ನನ್ನನ್ನು ಅನಗತ್ಯ ತಿರುಗಾಡಿಸಿದರು, ಎನ್ ಕೌಂಟರ್ ಮಾಡುವ ಸಾಧ್ಯತೆ ಇತ್ತು ಎಂಬ ಆರೋಪದ ಬಗ್ಗೆ ಕೇಳಿದಾಗ, "ಸಿ.ಟಿ. ರವಿ ಏನು ಬೇಕಾದರೂ ಆರೋಪ ಮಾಡುತ್ತಾರೆ. ಆರೋಪ ಮಾಡುವುದರಲ್ಲಿ, ಮಾತು ತಿರುಚುವುದರಲ್ಲಿ ಸಿ.ಟಿ. ರವಿ ನಿಪುಣ. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರು ಹೆಚ್ಚಾಗಿ ಮಾತನಾಡಿದರೆ ಅವರ ಬಗ್ಗೆ ಏನು ಮಾತನಾಡಬೇಕೋ ಮಾತನಾಡುತ್ತೇನೆ. ಅವರು ಮಾಡಿರುವ ತಪ್ಪಿಗೆ ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಕೋರುವುದು ಒಳಿತು ಎಂಬುದು ನನ್ನ ಭಾವನೆ. ಅವರ ಮನೆಯಲ್ಲೂ ಮಹಿಳೆಯರಿದ್ದಾರೆ. ತಾಯಿ ಜನ್ಮ ಕೊಟ್ಟರೆ ಮಾತ್ರ ಎಲ್ಲರೂ ಆಚೆ ಬರಲು ಸಾಧ್ಯ. ಇಲ್ಲದಿದ್ದರೆ ಇವರು ಆಚೆ ಬರಲು ಆಗುವುದಿಲ್ಲ. ಕಳೆದ 10 ವರ್ಷಗಳಿಂದ ಇವರು ಬೇರೆ ದಾರಿ ಕಂಡುಕೊಂಡಿದ್ದಾರೋ ಏನೋ ಗೊತ್ತಿಲ್ಲ" ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಫೆಬ್ರವರಿ 7ಕ್ಕೆ ದೀಪಕ್ ಮಧುವನಹಳ್ಳಿ ನಿರ್ದೇಶನದ ʼಅನ್‌ಲಾಕ್ ರಾಘವʼ ಸಿನಿಮಾ ರಿಲೀಸ್
ಎಸ್ ಪಿಜಿ ಭದ್ರತೆ ತೆಗೆದುಕೊಳ್ಳಲಿ: ನನಗೇನಾದರೂ ಆದರೆ ಡಿ.ಕೆ. ಶಿವಕುಮಾರ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಕಾರಣ ಎಂಬ ರವಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಸಿ.ಟಿ. ರವಿ ಕೆಲವು ವಿಚಾರದಲ್ಲಿ ಪ್ರಚಂಡರು. ದೆಹಲಿಯಲ್ಲಿ ಅವರದೇ ಸರ್ಕಾರ ಇದೆ. ಅವರಿಗೆ ಹೇಳಿ ಎಸ್ ಪಿಜಿ ಭದ್ರತೆ ತೆಗೆದುಕೊಳ್ಳಲಿ. ಅಥವಾ ರಾಜ್ಯ ಸರ್ಕಾರದಿಂದ ಭದ್ರತೆ ಪಡೆದು ಹಿಂದೆಯೊಂದು ಮುಂದೆ ಒಂದು ಭದ್ರತಾ ವ್ಯಾನ್ ಹಾಕಿಕೊಂಡು ಓಡಾಡಲಿ. ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲವಾದರೆ ಎಸ್ ಪಿಜಿ ಭದ್ರತೆ ಪಡೆಯಲಿ" ಎಂದರು. ಕೆಲವು ಸಚಿವರ ವಿರುದ್ಧ ಶಾಸಕರ ಅಸಮಾಧಾನದ ಬಗ್ಗೆ ಕೇಳಿದಾಗ, "ನನಗೆ ಈ ವಿಚಾರ ಗೊತ್ತಿಲ್ಲ" ಎಂದು ತಿಳಿಸಿದರು.
ಬೆಳಗಾವಿ ಸಮಾವೇಶದ ಬಗ್ಗೆ ಕೇಳಿದಾಗ, ಇದೊಂದು ಐತಿಹಾಸಿಕ ಕಾರ್ಯಕ್ರಮ. ಗಾಂಧೀಜಿ ಅವರು ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಗಳಿಗೆಯನ್ನು, ಅವರ ನೆನಪುಗಳನ್ನು ಸ್ಮರಿಸುವ ಕಾರ್ಯಕ್ರಮ. ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿ ಕೊಟ್ಟ ಕರೆ ನೆನಪು ಮಾಡಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಬೆಳಗಾವಿಯಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜ್ಯ ಹಾಗೂ ರಾಷ್ಟ್ರ ನಾಯಕರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಸಾರ್ವಜನಿಕ ಸಮಾವೇಶ ಕೂಡ ಹಮ್ಮಿಕೊಳ್ಳಲಾಗಿದೆ. ಸುವರ್ಣ ಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡಲಾಗುತ್ತಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇದೆಲ್ಲದರ ಜವಾಬ್ದಾರಿ ತೆಗೆದುಕೊಂಡು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.