ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಟ್ವೀಟ್ ವಾರ್ ಮುಂದುವರೆದಿದೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ತಮ್ಮ ಹೇಳಿಕೆಗೆ ರಾಜಕೀಯ ಬಣ್ಣ ಹಚ್ಚುವುದು ಬೇಡ ಎಂದಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, "ನಾಡಿನ ಹಿರಿಯ ರಾಜಕಾರಣಿ ಹಾಗೂ ಮುತ್ಸದ್ದಿ  ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗಬೇಕಿತ್ತು ಎಂಬ ನನ್ನ  ಹೇಳಿಕೆ ಕರ್ನಾಟಕದ ಹಲವು ದಶಕಗಳ ರಾಜಕೀಯ ವಾಸ್ತವತೆಯನ್ನು ಆಧರಿಸಿದ ಮನದಾಳದ ಮಾತು. ಈ ಹೇಳಿಕೆಗೆ ರಾಜಕೀಯದ ಬಣ್ಣಕಟ್ಟಿ ಅಪಾರ್ಥ ಕಲ್ಪಿಸುವಂತೆ ವಿಶ್ಲೇಷಿಸುವುದು ಆರೋಗ್ಯಕರವಲ್ಲ. ಈ ಹೇಳಿಕೆಯ ಮೂಲಕ ರಾಜಕೀಯ ಲಾಭ ಪಡೆಯುವ ಕೀಳು ಅಭಿರುಚಿ ನನ್ನದಲ್ಲ. ಖರ್ಗೆಯವರದು ಪಕ್ಷ , ಜಾತಿ ಎಲ್ಲವನ್ನೂ ಮೀರಿದ ಮಹೋನ್ನತ ವ್ಯಕ್ತಿತ್ವ ಎನ್ನುವುದನ್ನು ನಾವು ಮರೆಯಬಾರದು" ಎಂದಿದ್ದಾರೆ.




ಚಿಂಚೋಳಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಯಾವತ್ತೋ ಸಿಎಂ ಆಗಬೇಕಿತ್ತು ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಖರ್ಗೆಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಹೆಚ್ಡಿಕೆ ಗೆ ಆಗ್ರಹಿಸಿದ್ದರು. 


ಮತ್ತೊಂದೆಡೆ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, "ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿರುವುದು ಸರಿಯಾಗಿಯೇ ಇದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇವಲ ಮುಖ್ಯಮಂತ್ರಿ ಸ್ಥಾನವಲ್ಲ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆ ಅವರಿಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಮುಖ್ಯಮಂತ್ರಿ ಸ್ಥಾನದ ಅರ್ಹತೆ ಹೊಂದಿರುವ ಬಹಳ ಜನ ಇದ್ದಾರೆ. ಅವರಲ್ಲಿ  ಹೆಚ್.ಡಿ.ರೇವಣ್ಣ ಕೂಡಾ ಒಬ್ಬರು. ಎಲ್ಲಕ್ಕೂ ಕಾಲ‌ ಕೂಡಿ ಬರಬೇಕು" ಎಂದು ಹೇಳುವ ಮೂಲಕ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದರು. ಈ ಬೆನ್ನಲ್ಲೇ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.