ರೈತರ ಹೆಸರಿನಲ್ಲಿ ರಾಜಕೀಯ ಬೇಡ: ವಿಪಕ್ಷಗಳಿಗೆ ಸಿಎಂ ತಿರುಗೇಟು
ರೈತರ ಬದುಕು ಹಸನು ಮಾಡಲು `ರೈತ ಸ್ಪಂದನ` ಕಾರ್ಯಕ್ರಮ ರೂಪಿಸಲು ಸರ್ಕಾರ ಚಿಂತಿಸಿದೆ ಎಂದು ತಿಳಿಸಿದರು.
ಬೆಂಗಳೂರು: ರೈತರ ಸಮಸ್ಯೆಗಳೊಂದಿಗೆ ರಾಜಕೀಯ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಭಾಶನ್ ಮಾಡಿದ ಅವರು, ತಾವು ಅಧಿಕಾರಕ್ಕೆ ಬಂದು 85 ದಿನಗಳಾಗಿದೆ. ಈ 85 ದಿನಗಳಲ್ಲಿ ಎಲ್ಲಾ ದಿನವೂ ರೈತರ ಅಭಿವೃದ್ಧಿಗಾಗಿಯೇ ಚಿಂತಿಸಿದ್ದೇನೆ. ಹಾಗಾಗಿ ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗದಿರಿ ಎಂದರಲ್ಲದೆ, ರೈತರ ವಿಚಾರವನ್ನು ಇಟ್ಟುಕೊಂಡು ವಿರೋಧ ಪಕ್ಷಗಳು ರಾಜಕೀಯ ಮಾಡುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಮುಂದುವರೆದು ಮಾತನಾಡಿದ ಅವರು, 49 ಸಾವಿರ ಕೋಟಿ ರೂ. ಕೃಷಿ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ನಿರ್ಧಾರಿಸಿದೆ. ರೈತರ ಸಾಲ ಮನ್ನಾ ಅತಿ ದೊಡ್ಡ ಪ್ರಕ್ರಿಯೆ, ಯಾವುದೇ ರಾಜ್ಯದಲ್ಲೂ ಈ ಪ್ರಮಾಣದ ಸಾಲಮನ್ನಾ ಜಾರಿಯಾಗಿಲ್ಲ. ಅಷ್ಟೇ ಅಲ್ಲದೆ, ರೈತರ ಬದುಕು ಹಸನು ಮಾಡಲು 'ರೈತ ಸ್ಪಂದನ' ಕಾರ್ಯಕ್ರಮ ರೂಪಿಸಲು ಸರ್ಕಾರ ಚಿಂತಿಸಿದೆ ಎಂದು ತಿಳಿಸಿದರು.
ಈಗಾಗಲೇ ಸಹಕಾರಿ ಬ್ಯಾಂಕ್ನ 20.38 ಲಕ್ಷ ರೈತರು ಸಾಲ ಮನ್ನಾ ಫಲಾನುಭವಿಗಳಾಗಿದ್ದು, ವಾಣಿಜ್ಯ ಬ್ಯಾಂಕ್ಗಳಲ್ಲಿನ ಸಾಲವನ್ನೂ ಮನ್ನಾ ಮಾಡಲು ಶೀಘ್ರ ಆದೇಶ ನೀಡಲಾಗುವುದು. ಕೃಷಿ ಸಾಲ ಮನ್ನಾದಿಂದ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದರು.
ಮುಂದುವರೆದು ಮಾತನಾಡಿದ ಅವರು, ನೀರಿನ ಸದ್ಬಳಕೆಗೆ ಇಸ್ರೆಲ್ ಮಾದರಿ ನೀರಾವರಿ ಯೋಜನೆ ಜಾರಿಗೆ ತರಲು ಖ್ಯಾತ ಕೃಷಿ ತಜ್ಞರ ಮೂಲಕ ಕೃಷಿ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ವಲಯದ ಅಭಿವೃದ್ಧಿ ಮತ್ತು ಆಧುನಿಕ ಕೃಷಿ ಪದ್ಧತಿ ಬಗ್ಗೆ ಜನರಿಗೆ ಅರಿವು ಮೂಡಿಸಲು ಸರಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.