ಎಚ್ಡಿಕೆ ಪ್ರವಾಸಕ್ಕಿದೆ ವೈದ್ಯರ ನಿಯಮ
ಕುಮಾರಸ್ವಾಮಿ ಪ್ರವಾಸ ವೇಳೆ ಪಾಲನೆ ಆಗಲೇ ಬೇಕಿದೆ ಕೆಲವು ನಿಯಮಗಳು.
ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಇಂದಿನಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರವಾಸದಲ್ಲಿ ಎಚ್ಡಿಕೆ ಕೆಲವೊಂದು ನಿಯಮಗಳನ್ನು ಪಾಲಿಸಲೇ ಬೇಕಾದ ಅನಿವಾರ್ಯತೆ ಅವರಿಗಿದೆ. ಆದರೆ, ಇದು ಪಕ್ಷದ ನಿಯಮವಲ್ಲ. ವೈದ್ಯರ ನಿಯಮಗಳು.
ಕಳೆದ ತಿಂಗಳಷ್ಟೇ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಎಚ್.ಡಿ. ಕುಮಾರಸ್ವಾಮಿ ಇಂದಿನಿಂದ ಜೆಡಿಎಸ್ ರಾಜ್ಯ ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ವೈದ್ಯರು ಅವರಿಗೆ ಕೆಲವೊಂದು ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ. ಪ್ರವಾಸ ವೇಳಾಪಟ್ಟಿಯಲ್ಲೇ ಎಚ್ಡಿಕೆ ಆರೋಗ್ಯದ ಬಗ್ಗೆ ವಹಿಸಬೇಕಾದ ಸೂಚನೆಗಳು ಆಯಾ ಕ್ಷೇತ್ರದ ಆಯೋಜಕರ ಕೈ ಸೇರಲಿದೆ.
ಪ್ರವಾಸದ ಸಮಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಪಾಲಿಸಬೇಕಾದ ನಿಯಮಗಳು ಹೀಗಿವೆ:
* ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಬಂದಾಕ್ಷಣ ಪಟಾಕಿ ಸಿಡಿಸುವಂತಿಲ್ಲ.
* ಎಚ್ಡಿಕೆ ಕಾರ್ಯಕ್ರಮದಲ್ಲಿ ಇರುವ ತನಕ ಪಟಾಕಿ ಸಿಡಿಸಿ ಹೊಗೆಯೆಬ್ಬಿಸುವಂತಿಲ್ಲ.
* ವಾಹನ ಓಡಿಸಿ ಅಥವಾ ಜನರ ಓಡಾಟದಿಂದ ಧೂಳೇಳದಂತೆ ನೋಡಿಕೊಳ್ಳಬೇಕು.
* ಎಚ್ಡಿಕೆಗೆ ಹೂಗುಚ್ಚ, ಹಾರ ತುರಾಯಿ ಹಾಕುವಂತಿಲ್ಲ.
* ಎಚ್ಡಿಕೆಗೆ ನೂಕಾಟ ಮಾಡಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
* ಇಡೀ ಪ್ರವಾಸದಲ್ಲಿ ಎಚ್ಡಿಕೆ ಆರೋಗ್ಯ ನೋಡಿಕೊಳ್ಳಲು ನರ್ಸ್ ನೇಮಕ ಮಾಡಲಾಗಿದ್ದು, ನರ್ಸ್ ಸಮಯಕ್ಕೆ ಸರಿಯಾಗಿ ಅವರು ತೆಗೆದುಕೊಳ್ಳಬೇಕಾದ ಆಹಾರ ಮತ್ತು ಔಷದೋಪಚಾರದ ಹೊಣೆ ಹೊತ್ತಿದ್ದಾರೆ.
ವೈದ್ಯರ ಸೂಚನೆ ಮೇರೆಗೆ ಕುಮಾರಸ್ವಾಮಿ ಈ ಎಲ್ಲಾ ಸೂಚನೆಗಳನ್ನು ಪಾಲನೆ ಮಾಡಬೇಕಾಗಿದೆ. ಆರೋಗ್ಯ ಸಮಸ್ಯೆ ಆಗದಂತೆ ಚುನಾವಣಾ ಪ್ರಚಾರ ನಡೆಸಲು ಈ ಸಿದ್ಧತೆ ನಡೆಸಲಾಗಿದೆ. ಪಟಾಕಿ ಹೊಗೆಯಿಂದಲೇ ಎಚ್ಡಿಕೆಗೆ ಅಲರ್ಜಿ ಆರಂಭವಾಗಿದ್ದ ಕಾರಣ ಧೂಳಿನಿಂದ ಅವರ ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಅದಲ್ಲದೇ, ಹೂವು ಅಥವಾ ಹಾರದ ವಾಸನೆ ಕೂಡ ಅವರ ಆರೋಗ್ಯಕ್ಕೆ ಸಮಸ್ಯೆ ಉಂಟುಮಾಡಬಹುದು ಎಂದು ವಿವರಿಸಿರುವ ವೈದ್ಯರು, ಈ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿಕೆ ಈ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ.