ಬೆಂಗಳೂರು: ಕಳೆದ ಮೂರು ದಿನದಿಂದ ಖಾಸಗಿ ವೈದ್ಯರ ಪ್ರತಿಭಟನೆಯಿಂದಾಗಿ ಉಂಟಾಗಿರುವ ಸಮಸ್ಯೆಗೆ ಸರ್ಕಾರ ಮತ್ತು ವೈದ್ಯರು ಅಂತಿಮ ಪರಿಹಾರ ಕಂಡುಕೊಳ್ಳದಿದ್ದರೆ ಈ ವಿಷಯದಲ್ಲಿ ಹೈಕೋರ್ಟ್ ಮಧ್ಯಸ್ಥಿಕೆ ವಹಿಸುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.

 

ನೆಲಮಂಗಲದ ಆದಿತ್ಯನಾರಾಯಣ ಶೆಟ್ಟಿ ಹಾಗೂ ಅಮೃತೇಶರವರು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತರಕ್ಷಣಾ ಅರ್ಜಿಯನ್ನು ಪರಿಗಣಿಸಿ  ವಿಚಾರಣೆ ನಡೆಸಿದ  ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯದೀಶ ಪಿ.ಎಸ್ ದಿನೇಶಕುಮಾರರನ್ನು ಒಳಗೊಂಡ ಪೀಠವು ವೈದ್ಯರು ಮತ್ತು ಸರ್ಕಾರದ ನಡುವೆ  ಈ ವಿಷಯವಾಗಿ ಏರ್ಪಟ್ಟಿರುವ ವಿವಾದ ಬಗ್ಗೆ ಮಾಹಿತಿ ಸಲ್ಲಿಸುವಂತೆ ಭಾರತೀಯ ವೈದಕೀಯ ಸಂಘ ಹಾಗೂ ರಾಜ್ಯದ ಅಡ್ವೋಕೇಟ್ ಜನರಲ್ ರನ್ನು  ಕೇಳಿದ್ದು, ಒಂದುವೇಳೆ ಸರ್ಕಾರ ಮತ್ತು ವೈದ್ಯರು ಇದಕ್ಕೆ ಸಮರ್ಪಕವಾದ ಪರಿಹಾರವನ್ನು ಕಂಡುಕೊಳ್ಳದಿದ್ದರೆ  ಹೈಕೋರ್ಟ್ ಇದರ ಮಧ್ಯ ಪ್ರವೇಶಿಸುತ್ತದೆ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

 

ಸೋಮವಾರದಿಂದ ಖಾಸಗಿ ಆಸ್ಪತ್ರೆಯ ವೈದ್ಯರು ಕೆಪಿಎಂಇ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದರಿಂದಾಗಿ ರಾಜ್ಯದಲ್ಲೆಡೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಲಭಿಸದೆ ಸಾವನ್ನಪ್ಪಿರುವ ಸಂಗತಿಯನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಖಾಸಗಿ ಆಸ್ಪತ್ರೆಯ ವೈದ್ಯರ ಮುಷ್ಕರದಿಂದಾಗಿ ರಾಜ್ಯದಲ್ಲಿ ಇದುವರೆಗೂ 30ಕ್ಕೂ ಹೆಚ್ಚು ಬಲಿಯಾಗಿದೆ. ಜನರ ಹಿತದೃಷ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಸರ್ಕಾರ ಹಾಗೂ ವೈದ್ಯರ ಸಂಘ ಆದಷ್ಟು ಬೇಗ ಒಂದು ಅಭಿಪ್ರಾಯಕ್ಕೆ ಬರುವುದು ಸೂಕ್ತ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.