ಮಕ್ಕಳಿಗಾಗಿ ‘ಆಸ್ತಿ’ ಮಾಡುವುದು ಬೇಡ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ..!
ಮಕ್ಕಳ ಲಾಲನೆ ಪಾಲನೆ - ಪೋಷಣೆ ನೀಡುವಷ್ಟು ಮುದ ಮತ್ಯಾವುದರಿಂದಲೂ ಅಸಾಧ್ಯ. ಮಕ್ಕಳಿದ್ದರೆ ನಗು. ಸಡಗರ, ಜೀವಂತಿಕೆ ಕಟ್ಟಿಟ್ಟ ಬುತ್ತಿ, ಕಪಟ, ಸುಳ್ಳು, ತಟವಟಗಳಿರಯದ ಮಕ್ಕಳು ದೈವಸ್ವರೂಪಿ, ಸಮಭಾವ-ಸಮಾನತೆ ಮಕ್ಕಳ ಮೂಲ ಗುಣ.
ಮಕ್ಕಳು ಮನೆಯ ನಂದಾದೀಪ, ಮನೆ-ಮನ ಬೆಳಗುವ ಹೊಂಬೆಳಕು. ದೈನಂದಿನ ಬದುಕಿನ ನೋವು, ಸಂಕಟ ಮತ್ತು ದುಃಖಗಳನ್ನು ಮಣಿಸಿ ಸಾಮೀಪ್ಯದ ಪ್ರತಿಕ್ಷಣಗಳನ್ನು ಉಲ್ಲಾಸಮಯವಾಗಿಸಿ ಸಂತಸದ ಸವಿಭಾವ ಮೂಡಿಸುವ ಚೇತನ ಮಕ್ಕಳೆಂಬುದು ಅನುಭವದ ನುಡಿ, ನಿಜವಾದ ಮಾತು, ಮಕ್ಕಳ ನಗು, ಮುಗ್ಧ ನಡವಳಿಕೆ ಸೂಜಿಗಲ್ಲಿನಂತೆ, ಸರ್ವರನ್ನು ಸೆಳೆಯಬಲ್ಲುದು.
ಮಕ್ಕಳ ಲಾಲನೆ ಪಾಲನೆ - ಪೋಷಣೆ ನೀಡುವಷ್ಟು ಮುದ ಮತ್ಯಾವುದರಿಂದಲೂ ಅಸಾಧ್ಯ. ಮಕ್ಕಳಿದ್ದರೆ ನಗು. ಸಡಗರ, ಜೀವಂತಿಕೆ ಕಟ್ಟಿಟ್ಟ ಬುತ್ತಿ, ಕಪಟ, ಸುಳ್ಳು, ತಟವಟಗಳಿರಯದ ಮಕ್ಕಳು ದೈವಸ್ವರೂಪಿ, ಸಮಭಾವ-ಸಮಾನತೆ ಮಕ್ಕಳ ಮೂಲ ಗುಣ.
ಪ್ರೇಮ-ಕಾಮದ ಬಗ್ಗೆ ಏನೊಂದೂ ಅರಿಯದ ಮುಗ್ಧ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಮಕ್ಕಳ ಮುಗ್ಧತೆಯನ್ನೇ ಬಂಡವಾಳವಾಗಿಸಿಕೊಂಡು ವಿವಿಧ ಬಗೆಯ ಆಸೆಗಳನ್ನು ತೋರಿಸಿ ಮಕ್ಕಳ ಮೇಲೆ ಎಸಗುವ ಲೈಂಗಿಕ ದೌರ್ಜನ್ಯ ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸಬೇಕಾದ ವಿಚಾರ. ಎಲ್ಲೋ ಒಂದೆಡೆ ಮಾತ್ರ ಕಂಡು ಬರುತ್ತಿದ್ದ ಇಂತಹ ಘಟನೆಗಳು ಇಂದು ಎಲ್ಲೆಡೆ ಹರವಿಕೊಂಡಿರುವುದು ಅಪಾಯದ ಮುನ್ಸೂಚನೆ. ಆತಂಕದ ವಿಚಾರ.
ಮಕ್ಕಳ ಮುಗ್ಧತೆಯ ದುರ್ಬಳಕೆ ಹಾದಿಯ ಮೊದಲ ಹೆಜ್ಜೆಯೇ ದ್ವೇಷದ ಭಾವ ಭಿತ್ತುವಿಕೆ. ಅಸಮಾಧಾನಿತ ಪೋಷಕರು ಮಕ್ಕಳಲ್ಲಿ ತಂದೆ, ತಾಯಿ ಇಲ್ಲವೇ ಅಜ್ಜ-ಅಜ್ಜಿಯರ ಬಗ್ಗೆ ದ್ವೇಷ ಬರುವಂತಹ ಭಾವ-ದಲೆಗಳನ್ನು ಮಕ್ಕಳ ಹೃದಯ ಸಮುದ್ರದಲ್ಲಿ ಉಕ್ಕಿಸುವುದು ಅಕ್ಷಮ್ಯ ಅಪರಾಧ. ಮಕ್ಕಳ ಮನದಲ್ಲಿ ಜಾತಿ, ಮತ, ಧರ್ಮದ ವಿಷಬೀಜವನ್ನು ಭಿತ್ತಿ ಒಡಕು ಭಾವನೆಗಳನ್ನು ಮೂಡಿಸಿ ನಿರ್ದಿಷ್ಟ ಧರ್ಮ, ಮತ, ಜಾತಿ ಮತ್ತು ಜನಾಂಗವನ್ನು ಪ್ರೀತಿಸದಂತೆ, ದ್ವೇಷಿಸುವಂತೆ, ಸಹಚರ್ಯಕ್ಕೆ ಹೋಗದಂತೆ ತಡೆಯುವುದು ಸಹ ಮುಗ್ಧತೆಯ ದುರ್ಬಳಕೆ. ಈ ನಡವಳಿಕೆ ಮಕ್ಕಳ ಮನವನ್ನು ಸಂಕುಚಿತಗೊಳಿಸುವುದಲ್ಲದೆ, ಸಮಾನ ಭಾವದ ಸೆಲೆಯನ್ನೇ ಬತ್ತಿಸಿಬಿಡುವುದು ಖಂಡಿತ.
ಮಕ್ಕಳ ಮುಗ್ಧತೆಯ ದುರುಪಯೋಗ ಮಾಡಿಕೊಳ್ಳುವ ಕೃತ್ಯಕ್ಕೆ ದಿನಕ್ಕೊಂದು ಹೊಸ ಮಾರ್ಗಗಳು ತೆರೆದುಕೊಳ್ಳುವುದು ನಿಜ. ಆ ದುರಾತ್ಮರು ಎಲ್ಲೋ ದೂರದಲ್ಲಿಲ್ಲ. ನಮ್ಮೆಲ್ಲರ ನಡುವೆಯೇ ಮುಖವಾಡ ಹೊತ್ತು ಬದುಕುತ್ತಿದ್ದು, ನಿತ್ಯ ನಮ್ಮೊಂದಿಗೆ ವ್ಯವಹರಿಸುತ್ತಿರುತ್ತಾರೆ. ಸೂಕ್ಷ್ಮತೆಯ ಕೊರತೆಯೋ? ಸಂವೇದನಾಶೀಲತೆಯ ಅಭಾವವೋ? ಬದುಕಿನ ಧಾವಂತವೋ? ಒಟ್ಟಿನಲ್ಲಿ ಆ ದುರ್ಮಾರ್ಗಿಗಳನ್ನು ಗುರುತಿಸುವುದಿಲ್ಲ, ಗುರುತಿಸಿದರೂ ಗದರಿಸುವಲ್ಲಿ ಸಮಾಜ ಮತ್ತು ನಾಗರೀಕರು ವಿಫಲರಾಗುತ್ತಿರುವುದು ಕಟು ವಾಸ್ತವ. ಮಕ್ಕಳ ಮನ ಮಂದಿರವನ್ನು ಹಾಳುಗೆಡುವಿ ತನ್ಮೂಲಕ ಭವಿಷ್ಯದ ಸಮಾಜವನ್ನು ಅನಾರೋಗ್ಯಪೀಡತ, ಅನಾಗರೀಕಗೊಳಿಸುವ ಇಂತಹ ಕೃತ್ಯಗಳಿಗೆ ಇನ್ನಾದರೂ ಕಡಿವಾಣ ಬೀಳಬೇಕು. ಪೋಷಕರು ಮತ್ತು ನಾಗರೀಕರಾದಿಯಾಗಿ ಸರ್ವರೂ ಮಕ್ಕಳ ಮುಗ್ಧ ಲೋಕಕ್ಕೆ ಕಲ್ಲು ಹಾಕುವವರ ವಿರುದ್ಧ ಕಟ್ಟೆಚ್ಚರವಾಗಿರಬೇಕು. ಮಕ್ಕಳನ್ನು ಮಕ್ಕಳಂತೆ, ಕಲ್ಪನಾ-ಭಾವನಾ ಲೋಕದೊಳಗಿನ ವಿಹಾರಿಗಳಂತೆಯೇ ಇರಲು ಬಿಡಬೇಕು. ಆಗ ಮಾತ್ರ ಮಕ್ಕಳ ಮುಗ್ಧತೆಯ ದುರ್ಬಳಕೆಗೆ ಇತಿಶ್ರೀ ಹಾಡಲು ಸಾಧ್ಯ. ಇಲ್ಲವಾದಲ್ಲಿ ಮಕ್ಕಳ ಬದುಕು ಮಾತ್ರವಲ್ಲ ಸಮಾಜದ ಭವಿಷ್ಯವೂ ಮಣ್ಣುಪಾಲಾಗುವುದು ನಿಶ್ಚಿತ.
ಹಿಂದೆ ಆವಿಭಕ್ತ ಕುಟುಂಬಗಳಿದ್ದಾಗ ಅಜ್ಜ-ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅಪ್ಪ- ಅಮ್ಮ ಹೀಗೆ ಎಲ್ಲರೂ ಕೂಡಿ ಬಾಳುತ್ತಿದ್ದರು. ಕೂಡಿ ಬಾಳಿದರೆ ಸ್ವರ್ಗಸುಖ ಎಂದು ನಂಬಿದ್ದರು. ಅಂತಹ ಕುಟುಂಬಗಳಲ್ಲಿ ಯಾರ ಮಕ್ಕಳು ತಪ್ಪು ಮಾಡಿದರೂ ಯಾರಾದರೊಬ್ಬರು ತಿಳಿ ಹೇಳುತ್ತಿದ್ದರು, ತಿದ್ದುತ್ತಿದ್ದರು. ಅಜ್ಜ-ಅಜ್ಜಿಯರು ತಮ್ಮ ಅನುಭವಗಳನ್ನು ಪುರಾಣದ ಕಥೆಗಳನ್ನೋ ಹೇಳುತ್ತಾ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಾ ಅವರಲ್ಲಿ ನೈತಿಕ ಪ್ರಜ್ಞೆ ಜಾಗೃತವಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಮನುಷ್ಯ ನವ ನಾಗರೀಕತೆಗೆ ಒಳಗಾದಂತೆಲ್ಲ ಪಾಶ್ಚಿಮಾತ್ಯ ಜೀವನ ಶೈಲಿಗೆ ಮಾರು ಹೋಗಿದ್ದಾನೆ. ಅದರ ಪರಿಣಾಮವಾಗಿ ಅವಿಭಕ್ತ ಕುಟುಂಬಗಳೆಲ್ಲ ಛಿದ್ರ ಛಿದ್ರವಾಗಿವೆ. ದಾರಿ ತಪ್ಪುವ ಮಕ್ಕಳನ್ನು ತಡೆಯುವವರಿಲ್ಲ. ದಂಪತಿಗಳಿಬ್ಬರೂ ನೌಕರಿ ಹಿಡಿಯುತ್ತಾರೆ. ಮಾರ್ಗದರ್ಶನ ಮಾಡಲು ಮನೆಯಲ್ಲಿ ಹಿರಿಯರೂ ಇಲ್ಲ. ತಪ್ಪು ಮಾಡಿದ್ದನ್ನು ಕೇಳುವವರೂ ಇಲ್ಲ ಎನ್ನುವಂತಾಗಿದೆ. ಮನೆಯೇ ಮೊದಲ ಪಾಠಶಾಲೆ ಎಂದರೆ ಅಲ್ಲಿಯೂ
ತಿದ್ದುವವರಿಲ್ಲ. ಶಾಲೆಗಳಲ್ಲಿಯೂ ಸ್ಥಿತಿ ಭಿನ್ನವಾಗಿಲ್ಲ ಎಂದ ಮೇಲೆ ಮಕ್ಕಳಲ್ಲಿ ಸನ್ನಡತೆಯನ್ನು ಬೆಳಸುವವರು ಯಾರು? ವ್ಯಕ್ತಿತ್ವವನ್ನು ರೂಪಿಸುವವರು ಯಾರು.
ಮಕ್ಕಳು ಶಿಕ್ಷಕರ ನಡುವಿನ ಸಂಬಂಧ ಹೇಗಿರಬೇಕು ಎನ್ನುವುದರ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಬಹುತೇಕ ಅಧ್ಯಯನಗಳು ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಿವೆ. ಅದೆಂದರೆ 'ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಪ್ರಬಲ ಭಾವನಾತ್ಮಕ ಸಂಬಂಧವು ಮನೆಯಿಂದ ಹೊರಗಿರುವ ಮತ್ತೊಂದು ಮನೆಯ ಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತದೆ. ಮಕ್ಕಳ ಏಳಿಗೆಯ ಕುರಿತ ಶಿಕ್ಷಕರ ಸಮರ್ಪಣಾಭಾವವು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಾಗೂ ನಡವಳಿಕೆಯ ತಳಹದಿಯಲ್ಲಿ ಶಾಲೆಯ ಅವಶ್ಯಕತೆಯನ್ನು ಪೂರೈಸುವ ಮಟ್ಟಕ್ಕೆ ಬೆಳೆಯಲು ನೆರವು ನೀಡುತ್ತದೆ.
ವಿದ್ಯಾರ್ಥಿ-ಶಿಕ್ಷಕರ ನಡುವಿನ ಸಕಾರಾತ್ಮಕ ಸಂಬಂಧ, ಕಲಿಕೆಯ ವೈಫಲ್ಯದಿಂದ ಮಕ್ಕಳನ್ನು ಪಾರು ಮಾಡುತ್ತದೆ. ಅದೇ ರೀತಿ, ಸಂಬಂಧ ಚೆನ್ನಾಗಿಲ್ಲದಿದ್ದರೆ ಮಗು ಎಲ್ಲಾ ವಿಧದಲ್ಲೂ ವೈಫಲ್ಯ ಅನುಭವಿಸಬೇಕಾಗುತ್ತದೆ. ಲಿಂಗ ಸೇರಿದಂತೆ ಹಲವಾರು ಅಂಶಗಳು ಈ ಸಂಬಂಧದಿಂದ ಪ್ರೇರಿತವಾಗಿರುತ್ತದೆ. ಜೊತೆಗೆ ಶಿಕ್ಷಣ ಮತ್ತು ನಡವಳಿಕೆಯಲ್ಲೂ ಸುಧಾರಣೆಗೆ ಉತ್ತಮ ಸಂಬಂಧ ಹಾದಿ ಮಾಡಿಕೊಡುತ್ತದೆ.
ಮಕ್ಕಳು-ಶಿಕ್ಷಕರ ನಡುವಿನ ಸಂಬಂಧ ಭವಿಷ್ಯದಲ್ಲಿ ಮಗುವಿನ ವೈಯಕ್ತಿಕ ಜೀವನದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ಸಂಬಂಧದಿಂದಲೇ ಮಗು ಜಗತ್ತನ್ನು ಸುತ್ತಲಿನ ಪರಿಸರವನ್ನು ಅರಿಯಲು ಆರಂಭಿಸುತ್ತದೆ. ಈ ಮೂಲಕ ಸಂವಹನ ಕೌಶಲ್ಯ ಬೆಳೆಯುತ್ತದೆ. ಸಂಬಂಧ ಚೆನ್ನಾಗಿದ್ದರೆ ಶಾಲೆಗೆ ಹೋಗುವುದು ಗೋಳು ಎಂದೆನಿಸದೆ ಕಲಿಕೆಯ ಆಸಕ್ತಿ ಹೆಚ್ಚುತ್ತದೆ. ಹೀಗಾಗಿ ಕಲಿಕೆ ಮತ್ತು ಕಲಿಸುವಿಕೆ ಎರಡೂ ಕೂಡ ಈ ಸಂಬಂಧದ ಮೇಲೆ ನಿಂತಿದೆ ಎಂದರೆ ತಪ್ಪಾಗುವುದಿಲ್ಲ.
ಗಾಂಧೀಜಿಯವರ ಪ್ರಕಾರ ವಿದ್ಯೆಯೆಂದರೆ, 'ಮಾನವೀಯತೆಯ ಗಳಿಕೆಯೇ ವಿದ್ಯೆಯ ಗುರಿ. ಸತ್ಯ, ಧರ್ಮದಿಂದ ನಡೆದುಕೊಂಡು ಮನಃಶುದ್ದಿ, ಕ್ರಿಯಾಶುದ್ದಿ ಉಳಿಸುವುದು ವಿದ್ಯೆಯ ಫಲವಾಗಿರಬೇಕು. ನಾವು ಕಲಿತ ವಿದ್ಯೆಯಿಂದ ಜೀವನ ಸರಿಯಾಗಿ ನಿರ್ವಹಿಸಲು ಬೇಕಾದ ಚಿಂತನೆಗಳು ಹೊಳೆಯುವಂತಿರಬೇಕು. ಬದುಕಿನಲ್ಲಿ ಸೃಜನಶೀಲತೆ ಮಾಡುವಂತಿರಬೇಕು ಒಳಿತು, ಕೆಡಕುಗಳ ಬಗ್ಗೆ ಅರಿವು ವಿದ್ಯೆಯಿಂದ ದೊರಕಬೇಕು. ಪಡೆದ ವಿದ್ಯೆಯು ನಿಮ್ಮಲ್ಲಿ ಸದಾಚಾರ, ನ್ಯಾಯಪರತೆ, ಸಾಮಾಜಿಕ ಹೊಂದಾಣಿಕೆ, ಸ್ನೇಹ, ಕರುಣೆ ಮುಂತಾದ ಮೌಲ್ಯಗಳನ್ನು ವರ್ಧಿಸಿ, ರಾಷ್ಟ್ರದ ಸರ್ವಾಂಗೀಣ ಉನ್ನತಿಗೆ ಅನುಕೂಲವಾಗುವಂತಿರಬೇಕು. ನಿಜವಾದ ವಿದ್ಯೆ ಮಾನವನ ವ್ಯಕ್ತಿತ್ವವನ್ನು ವಿಕಸಿತಗೊಳಿಸುವಂತಿರಬೇಕು. ಅನ್ಯಾಯ, ಮೋಸ, ವಂಚನೆ ಇತ್ಯಾದಿ ವೈರಗುಣಗಳನ್ನು ಮೆಟ್ಟಿ ಬಾಳೆ ಮಾಡುವಂತಿರಬೇಕು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಇತ್ತೀಚಿಗೆ ಪ್ರತಿ ದಿನವೂ ಮಾಧ್ಯಮಗಳಲ್ಲಿ ಕೇಳಿ ಬರುತ್ತಿರುವ ಅನೀತಿ, ಅನೈತಿಕ ಹಾಗೂ ಅನಾಚಾರಗಳ ಸುದ್ದಿಗಳಿಂದಾಗಿ ಇಡೀ ಮಾನವ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಇಂತಹ ಕೃತ್ಯಗಳಿಂದಾಗಿ, ಸತ್ಯ, ಅಹಿಂಸೆ, ದಯೆ, ಕರುಣೆ, ಭಕ್ತಿ, ವಿನಯ, ಪ್ರೀತಿ, ಭ್ರಾತೃತ್ವ, ವಿಶ್ವಾಸಕ್ಕೆ ಹೆಸರಾಗಿ ಸುಸಂಸ್ಕೃತರೆಂದು ಹೆಮ್ಮೆಯಿಂದ ಬೀಗುತ್ತಿದ್ದ ನಾಡಿನ ಸಂಸ್ಕೃತಿಗೆ ಕಳಂಕ ತಗುಲಿದೆ. ಇದು ನವನಾಗರೀಕತೆಯ ಬೆನ್ನು ಹತ್ತಿ ಆಧುನಿಕನೆಂದು ಬೀಗುತ್ತಿರುವ ಮನುಷ್ಯ ನೈತಿಕತೆಯನ್ನೇ ಕಳೆದುಕೊಳ್ಳುತ್ತಿದ್ದಾನೆ. ಸುಶಿಕ್ಷಿತರೆನಿಸಿಕೊಂಡವರಿಂದಲೇ ಇದೆಲ್ಲಾ ನಡೆಯುತ್ತಿರುವುದು ನಮ್ಮ ಭವ್ಯ ಸಂಸ್ಕೃತಿಯ ಮೇಲಾಗುತ್ತಿರುವ ಘೋರ ಅನ್ಯಾಯ. ಅದರಲ್ಲೂ ಇತ್ತೀಚಿಗೆ ಇಡೀ ಸಮಾಜದಲ್ಲಿ ಅಶ್ಲೀಲತೆ, ಅನೈತಿಕತೆ, ಅತ್ಯಾಚಾರ ಹಾಗೂ ಅನಾಚಾರಗಳು ನಡೆಯುತ್ತಿವೆ. ಯಾರೋ ತಿಳುವಳಿಕೆಯಿಲ್ಲದ ಮೂಢನಿಂದ ಇಂತಹ ಆಚಾತುರ್ಯಗಳು ನಡೆಯುತ್ತಿವೆ ಎಂದರೆ ಅಂತಹ ವ್ಯಕ್ತಿಗೆ ತಿಳುವಳಿಕೆ ನೀಡಬಹುದು. ಆದರೆ ಇಂದು ಎಲ್ಲ ಕೃತ್ಯಗಳು ಅತಿಹೆಚ್ಚು ವಿದ್ಯಾವಂತರೆನಿಸಿಕೊಂಡವರಿಂದಲೇ ವಯೋಮಾನ ಬೇದವಿಲ್ಲದೆ ನಡೆಯುತ್ತಿರುವುದು ನಿಜಕ್ಕೂ ಅಪರಾಧ. ಸರಸ್ವತಿಯ ದೇಗುಲಗಳೂ ಕೆಲವು ಮಂದಿ ನೀತಿಗೆಟ್ಟವರಿಂದ ತಮ್ಮ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ.
ಲೇಖಕರು: ಡಿ.ಸಿ.ರಾಮಚಂದ್ರ ಎಂ.ಎ (ಕನ್ನಡ, ರಾಜ್ಯಶಾಸ್ತ್ರ)
ಗೌರವ ಕೋಶಾಧ್ಯಕ್ಷರು, ತಾಲ್ಲೂಕು ಕಸಾಪ, ಮಾಗಡಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ