ಹೊರರಾಜ್ಯಗಳಲ್ಲಿ ಕನ್ನಡ ಕಲಿಕೆಗೆ ಪ್ರೋತ್ಸಾಹ ನೀಡಲು ಸರ್ಕಾರ ಬದ್ಧ!
ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು! ಇದಕ್ಕೆ ಸಾಕ್ಷಿಯಾಗಿರುವ ಈ ವಿದ್ಯಾರ್ಥಿಗಳು ನಾಡಿನ ಹೆಮ್ಮೆ- ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರು: ಹೊರರಾಜ್ಯಗಳಲ್ಲಿ ಕನ್ನಡ ಕಲಿಕೆಗೆ ಪ್ರೋತ್ಸಾಹಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ(Dr. CN Ashwaththanarayana) ಹೇಳಿದ್ದಾರೆ.
ಇಂದು ನಡೆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ 2019-20ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು! ಇದಕ್ಕೆ ಸಾಕ್ಷಿಯಾಗಿರುವ ಈ ವಿದ್ಯಾರ್ಥಿಗಳು ನಾಡಿನ ಹೆಮ್ಮೆ ಎಂದು ಬಣ್ಣಿಸಿದರು. ಹೊರರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಕಲಿಯುತ್ತಿರುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
"ಹೊರರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವವರಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ಬಣ್ಣಿಸಿದ ಅವರು, 18 ವರ್ಷಗಳಿಂದ ಈ ಕಾರ್ಯ ನಡೆಯುತ್ತಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಇದು ನಿಜಕ್ಕೂ ಒಂದು ರೀತಿಯ ಪ್ರೋತ್ಸಾಹವನ್ನು ನೀಡುತ್ತಿದೆ" ಎಂದರು.
"ಹೊರ ರಾಜ್ಯದಲ್ಲಿ ಕನ್ನಡದ ಕೆಲಸ ಮಾಡುತ್ತಿರುವ, ಕನ್ನಡ ಕಲಿಯುತ್ತಿರುವವರಿಗೆ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿವಾಗಿ ಶಕ್ತಿ ತುಂಬುವ ಕೆಲಸ ಆಗುತ್ತಿದೆ. ಕನ್ನಡದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವುದು ಸರ್ಕಾರದ ಕರ್ತವ್ಯ. ಇದಕ್ಕೆ ನಾವು ಬದ್ಧ," ಎಂದು ಅವರು ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಟಿ. ಎಸ್. ನಾಗಾಭರಣ, ಹೆಸರಾಂತ ಕವಿಗಳಾದ ಎಚ್. ಎಸ್. ವೆಂಕಟೇಶಮೂರ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸಿ.ಟಿ. ರವಿ ಉಪಸ್ಥಿತರಿದ್ದರು.