ವರನಟ ಡಾ.ರಾಜ್ ಕುಮಾರ್ ಅಪಹರಣ ಪ್ರಕರಣ: ಎಲ್ಲಾ ಆರೋಪಿಗಳು ಖುಲಾಸೆ
ಹದಿನೆಂಟು ವರ್ಷಗಳ ಬಳಿಕ ಪ್ರಕರಣ ವಿಚಾರಣೆ ಮುಗಿದು ಎಲ್ಲಾ 9 ಆರೋಪಿಗಳನ್ನು ನ್ಯಾಯಾಧೀಶರು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈರೋಡು: ವರನಟ ಡಾ.ರಾಜ್ ಕುಮಾರ್ ಅವರ ಅಪಹರಣ ಪ್ರಕರಣದಲ್ಲಿ ಎಲ್ಲಾ 9 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಈರೋಡ್‌ನ ಜಿಲ್ಲಾ ಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಿದೆ.
ಜುಲೈ 30, 2000 ದಲ್ಲಿ , ಕುಖ್ಯಾತ ದಂತಚೋರ, ನರಹಂತಕ, ಕಾಡುಗಳ್ಳ ವೀರಪ್ಪನ್ ಡಾ.ರಾಜ್ ಅವರನ್ನು ಗಾಜನೂರಿನಲ್ಲಿನ ತೋಟದ ಮನೆಯಿಂದ ಅಪಹರಿಸಿದ್ದ. ಡಾ.ರಾಜ್ ಅವರೊಂದಿಗೆ ಅವರ ಅಳಿಯ ಗೋವಿಂದರಾಜು ಮತ್ತು ನಾಗಪ್ಪ ಮಾರಡಗಿ ಅವರೂ ಕೂಡ ಅಪಹರಣಕ್ಕೊಳಗಾಗಿದ್ದರು. 108 ದಿನಗಳ ಬಳಿಕ ಬಿಡುಗಡೆ ಮಾಡಲಾಗಿತ್ತು.
ಈ ಸೆನ್ಸೇಷನಲ್ಕೇಸ್ನಲ್ಲಿ ವೀರಪ್ಪನ್ ಸೇರಿದಂತೆ 12 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರಲ್ಲಿ ವೀರಪ್ಪನ್, ಸೇತುಕುಡಿ ಗೋವಿಂದನ್ ಹಾಗೂ ರಂಗಸಾಮಿ ವಿಚಾರಣೆ ವೇಳೆಯೇ ಸಾವನ್ನಪ್ಪಿದ್ದಾರೆ. ಹದಿನೆಂಟು ವರ್ಷಗಳ ಬಳಿಕ ಪ್ರಕರಣ ವಿಚಾರಣೆ ಮುಗಿದು ಎಲ್ಲಾ 9 ಆರೋಪಿಗಳನ್ನು ನ್ಯಾಯಾಧೀಶರು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಪ್ರಾಸಿಕ್ಯೂಶನ್ ಮತ್ತು ಪೊಲೀಸ್ ಇಲಾಖೆ ಅಪಹರಣದ ಕುರಿತು ಸಾಕ್ಷ್ಯ ನೀಡುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಎಲ್ಲಾ 9 ಆರೋಪಿಗಳನ್ನು ಖುಲಾಸೆಗೊಳಿಸಿದೆ.