ಚಿತ್ರದುರ್ಗ: ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಗೆ ಸೇರಿದ ಮಾನವ ರಹಿತ ಲಘು ವಿಮಾನ ಚಿತ್ರದುರ್ಗ ತಾಲ್ಲೂಕಿನ ಜೋಡಿ ಚಿಕ್ಕೇನಹಳ್ಳಿ ಸಮೀಪ ಪತನಗೊಂಡಿದೆ.


COMMERCIAL BREAK
SCROLL TO CONTINUE READING

ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಗೆ ಸೇರಿದ 'ತಪಾಸ್-4 ಎಡಿಇ 19' ಮಾನವ ರಹಿತ ಲಘು ವಿಮಾನವನ್ನು ಪ್ರಾಯೋಗಿಕವಾಗಿ ಇಂದು ಚಿತ್ರದುರ್ಗದ  ಡಿಆರ್‌ಡಿಒ ಕೇಂದ್ರದಿಂದ ಹಾರಿಸಲಾಗಿತ್ತು. ದೇಶದ ಗಡಿ ಪ್ರದೇಶ ಹಾಗೂ ನೌಕಾ ಸೇನೆಗೆ ಸೇರಿಸುವ ಉದ್ದೇಶದಿಂದ ಡಿಆರ್‌ಡಿಒ ಮಾನವ ರಹಿತ ಯುದ್ದ ವಿಮಾನವನ್ನು ಅಭಿವೃದ್ಧಿ ಮಾಡುತ್ತಿತ್ತು. ಈ ಹಿಂದೆ ನಡೆಸಿದ ಹಲವು ಪರೀಕ್ಷೆಗಳಲ್ಲಿ ಇದು ಯಶಸ್ವಿಯಾಗಿತ್ತು.



ಇಂದು ನಸುಕಿನ ವೇಳೆ ಚಳ್ಳಕೆರೆ ತಾಲ್ಲೂಕಿನ ಕುದಾಪುರದ ಡಿಆರ್‌ಡಿಒ ಕೇಂದ್ರದಲ್ಲಿ ಹಾರಿಸಲಾದ ಈ ವಿಮಾನ ಹಾಸನದ ವಾಯುನೆಲೆ ವರೆಗೂ ಹೋಗಿ ಚಳ್ಳಕೆರೆಗೆ ಹಿಂದಿರುಗಬೇಕಿತ್ತು. ಆದರೆ ಮುಂಜಾನೆ ಸುಮಾರು 6:30ರ ಸುಮಾರಿಗೆ ವಿಮಾನವು ರೇಡಾರ್ ಸಂಪರ್ಕ ಕಳೆದುಕೊಂಡಿತ್ತು. ಸಂಪರ್ಕ ಕಡಿತಗೊಂಡ 15 ನಿಮಿಷಗಳಲ್ಲಿ ಅದು ನೆಲಕ್ಕೆ ಅಪ್ಪಳಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.


ಪತನಗೊಂಡಿರುವ ವಿಮಾನದ ಮೇಲೆ  ತಪಾಸ್-4 ಎಡಿಇ 19 ಎಂದು ಬರೆಯಲಾಗಿದೆ.