ಶಬರಿಮಲೆ ವಿವಾದ: ರಾಜ್ಯದಿಂದ ಕೇರಳಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಥಗಿತ
ಕೇರಳದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಥಗಿತ.
ಬೆಂಗಳೂರು: ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಬುಧವಾರ ಬೆಳಗಿನ ಜಾವ ಇಬ್ಬರು ಮಹಿಳೆಯರು ಪ್ರವೇಶ ಮಾಡಿದ ಬಳಿಕ ಕೇರಳದೆಲ್ಲೆಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂಸಾಚಾರದ ಹಿನ್ನಲೆಯಲ್ಲಿ ಕರ್ನಾಟಕದಿಂದ ಕೇರಳಕ್ಕೆ ಸಂಚರಿಸಬೇಕಾಗಿದ್ದ ಎಲ್ಲಾ ಕೆಎಸ್ಆರ್ಟಿಸಿ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ.
ವ್ಯಾಪಕ ಹಿಂಸಾಚಾರ ನಡೆದಿದೆ. ಪಂದಾಲಂನಲ್ಲಿ ಸಿಪಿಐಎಂ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆ ವೇಳೆ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದ 55 ವರ್ಷದ ಶಬರಿ ಮಲೆ ಕರ್ಮ ಸಮಿತಿಯ ಸದಸ್ಯರೊಬ್ಬರು ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಕೇರಳದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕೇರಳಕ್ಕೆ ಹೋಗಬೇಕಿದ್ದ 3 ಕೆಎಸ್ಆರ್ಟಿಸಿ ಬಸ್‌ಗಳು, ಮಂಗಳೂರಿನಿಂದ ಹೇಗಬೇಕಿದ್ದ ಸುಮಾರು 40 ಬಸ್‌ಗಳು ಹಾಗೂ ಇತರೆ ಭಾಗಗಳಿಂದ ಕೇರಳಕ್ಕೆ ತೆರಳಬೇಕಿದ್ದ ಸುಮಾರು 20 ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.