ಕೃಷ್ಣಬೈರೇಗೌಡರೇ ನಿಮ್ಮ ಜಾಣ ಮರೆವಿಗೊಂದು ನೆನಪಿನ ಗುಳಿಗೆ: ಸದಾನಂದ ಗೌಡ ಟ್ವೀಟ್
ಕನ್ನಡಿಗರು ಕ್ಷಮಯಾ ಧರಿತ್ರಿ ಸ್ವಭಾವದವರು. ನಿಜ ಹೇಳಿ ಧೈರ್ಯವಾಗಿ ಚುನಾವಣೆ ಎದುರಿಸಿ- ಕೃಷ್ಣಬೈರೇಗೌಡರಿಗೆ ಸದಾನಂದ ಗೌಡರ ಕಿವಿಮಾತು
ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಅದೇ ಕ್ಷೇತ್ರದಿಂದ ಕಣಕ್ಕಿಲಿದಿರುವ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಬೈರೇಗೌಡರ ನಡುವಿನ ವಾಕ್ಸಮರ ಮುಂದುವರೆದಿದೆ.
ಕಳೆದ ಹಲವು ವರ್ಷಗಳಿಂದ ಚುನಾಯಿತರಾಗಿ ಮಂತ್ರಿಯಾಗಿರುವ ಡಿ.ವಿ. ಸದಾನಂದ ಗೌಡರು ಯಾವುದೇ ಅಭಿವೃದ್ಧಿ ಕೆಲಸಗಳನ್ನೂ ಮಾಡಿಲ್ಲ ಎಂಬ ಕೃಷ್ಣಬೈರೇಗೌಡರ ಆರೋಪಕ್ಕೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿರುಗೇಟು ನೀಡಿದ್ದು ಕೃಷ್ಣಬೈರೇಗೌಡರೇ ನಿಮ್ಮ ಜಾಣ ಮರೆವಿಗೊಂದು ನೆನಪಿನ ಗುಳಿಗೆ ಎಂದು ಟ್ವೀಟ್ ಮಾಡಿದ್ದಾರೆ.
ಮಾನ್ಯ ಶ್ರೀ ಕೃಷ್ಣಬೈರೇಗೌಡರವರೇ ನಿಮ್ಮ ಜಾಣ ಮರೆವಿಗೊಂದು ನೆನಪಿನ ಗುಳಿಗೆ . . ಸದಾನಂದ ಗೌಡರು ಏನು ಮಾಡಿದ್ದಾರೆ ಅಂತ ಕೇಳಿದ್ರಲ್ಲ. ನಿಮ್ಮದೇ ಪತ್ರದಲ್ಲಿದೆ , ನಿಮ್ಮ ಪ್ರಶ್ನೆಗೆ ಉತ್ತರ ಬೇರೆಯವರ ವಿಷಯ ಬಿಡಿ ನೀವು ಮಂತ್ರಿಯಾಗಿರುವ ಇಲಾಖೆಯ ಕೆಲಸಕ್ಕೆ ಇಲ್ಲೇ ಉತ್ತರವಿದೆ.
ನವದೆಹಲಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರಕ್ಕೆ ನರೇಗಾ ಕಾರ್ಯಕ್ರಮದಡಿ ಬಾಕಿ ನುದಾನ ಬಿಡುಗಡೆ ಮಾಡಲು ಮಾನವ ಸಲ್ಲಿಸಿದ ಸಮಯದಲ್ಲಿ ತಾವು ನೀಡಿದ ಸಹಕಾರ ಮತ್ತು ಬೆಂಬಲಕ್ಕಾಗಿ ಕೇಂದ್ರ ಸಚಿವ ಸದಾನಂದ ಗೌಡರಿಗೆ ಕೃಷ್ಣಬೈರೇಗೌಡರು ಧನ್ಯವಾದ ತಿಳಿಸಿ ಬರೆದಿರುವ ಪತ್ರವನ್ನು ಟ್ವೀಟ್ ಜೊತೆ ಶೇರ್ ಮಾಡಿದ್ದಾರೆ.
ದೆಹಲಿಗೆ ಬಂದು ಜೊತೆಗೆ ಊಟ ಮಾಡಿದ್ದು, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಿ ಶ್ರೀ ತೋಮರ್ ರವರನ್ನು ಭೇಟಿ ಮಾಡಿದ್ದು ಎಲ್ಲಕ್ಕೂ ಜಾಣ ಮರೆವು . ಛೆ!! ನೀವಿಷ್ಟು ಬೇಗ ಬಣ್ಣ ಬದಲಾಯಿಸ ಬಲ್ಲಿರಿ ಅಂತ ಅಂದುಕೊಂಡಿರಲಿಲ್ಲ . ಪ್ರಭುದ್ದರು ಅಂದುಕ್ಕೊಂಡಿದ್ದೆ ನಿಮ್ಮ ಗುರುಗಳ ತರಬೇತಿ ಚೆನ್ನಾಗಿದೆ. ಕರ್ನಾಟಕ ಗೌರವಿಸುವ ಬೈರೇ ಗೌಡ ಮಗ ನೀವಾದ ಕಾರಣ ಒಂದು ಕಿವಿಮಾತು, ಚುನಾವಣೆಯನ್ನು ಚುನಾವಣೆಯಾಗಿ ನಡೆಸಿ . ನಿಜ ಹೇಳಿ ಧೈರ್ಯವಾಗಿ ಚುನಾವಣೆ ಎದುರಿಸಿ. ಕನ್ನಡಿಗರು ಕ್ಷಮಯಾ ಧರಿತ್ರಿ ಸ್ವಭಾವದವರು ಎಂದು ಕಿವಿಮಾತು ಹೇಳಿದ್ದಾರೆ.