ಬೆಂಗಳೂರು: ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್‌ ಹಾಗೂ ಕೃಷಿಕ ಸಾಹಿತ್ಯಪರಿಷತ್ತು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡ ಜಯಂತಿ’ ಹಾಗೂ ‘ಕೆಂಪೇಗೌಡರ ಯಲಹಂಕ ಸಂಸ್ಥಾನದ ಇತಿಹಾಸ ಮತ್ತು ಐತಿಹ್ಯದ ಬಗ್ಗೆ ವಿಚಾರ ಸಂಕಿರಣ’ ಸಮಾರಂಭ ಉದ್ಘಾಟಿಸಿ ಮಾತನಾಡಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ನನ್ನ ಹೆಸರಿನೊಂದಿಗೆ ಗೌಡ ಎಂದು ಸೇರಿಸಿಕೊಂಡಿದ್ದಕ್ಕೆ ನಾನು ರಾಜ್ಯದ ಮುಖ್ಯಮಂತ್ರಿಯಾಗಿ, ಈಗ ಕೇಂದ್ರ ಸಚಿವನಾಗಿದ್ದೇನೆ. ಅದನ್ನು ಹೇಳಲು ನನಗೆ ಹಿಂಜರಿಕೆ, ನಾಚಿಕೆ ಇಲ್ಲ ಎಂದು ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸದಾನಂದ ಗೌಡರು, ನನ್ನ ಬಿಜೆಪಿ ಪಕ್ಷ, ನನ್ನ ಹೆತ್ತ ತಾಯಿ ಸಮಾನ. ಕುಗ್ರಾಮ ಮಂಡೆಕೋಲಿನಿಂದ ಬಂದ ಈ ಹುಡುಗನಿಗೆ ಪಕ್ಷ  ಎಲ್ಲವನ್ನು ಕೊಟ್ಟಿದೆ. ನನ್ನ ಪಕ್ಷ  ಒಕ್ಕಲಿಗ ಸಮಾಜಕ್ಕೆ ಉತ್ತಮ ಸ್ಥಾನಮಾನ ಪ್ರಾತಿನಿಧಿತ್ವವನ್ನು ನನ್ನ ಮೂಲಕ ಕೊಟ್ಟಿದೆ ಅನ್ನುವ ಮಾತನ್ನು ನಾನು ಹೆಮ್ಮೆಯಿಂದ ಕೇಳಿಕೊಂಡದ್ದನ್ನು ಬೇರೆ ರೀತಿ ಅರ್ಥೈಸಲಾಗಿದೆ ಎಂದಿದ್ದಾರೆ.



ನಾನಿಂದು ನಿರಂತರ ಚುನಾವಣೆಗಳನ್ನು ಗೆಲ್ಲಲು ಜಾತ್ಯತೀತವಾಗಿ, ಪಕ್ಷಾತೀತವಾಗಿ ನನ್ನನ್ನು ಜನರು ಆಯ್ಕೆ ಮಾಡಲು ನನ್ನ ಪಕ್ಷ ಮತ್ತು ಮೋದಿಯವರ ನಾಯಕತ್ವವೇ ಕಾರಣ. ಮುಂದೆ ಜನ ನಮ್ಮನ್ನು ಗುರುತಿಸುವುದು, ಗೌರವಿಸುವುದು ಮೋದಿಯವರ ನೇತೃತ್ವದಲ್ಲಿ ನಾವು ಮಾಡುವ ಕೆಲಸದಿಂದ ಎಂದು ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ.