ಬೆಂಗಳೂರು: ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಗುರಿಯಾಗಿದ್ದ ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ನ್ಯಾ.ಕೆ.ಎನ್. ಕೇಶವನಾರಾಯಣ ಅವರ ನೇತೃತ್ವದ ಆಯೋಗ ಇಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಸಲ್ಲಿಸಿದೆ. 


COMMERCIAL BREAK
SCROLL TO CONTINUE READING

ಈ ವರದಿ 320 ಪುಟಗಳನ್ನು ಒಳಗೊಂಡಿದ್ದು, 48 ಸಾಕ್ಷಿಗಳು ಹಾಗೂ ಇಬ್ಬರು ತನಿಖಾಧಿಕಾರಿಗಳ ವಿಚಾರಣೆ ನಡೆಸಿರುವ ಮಾಹಿತಿಯನ್ನು ಹೊಂದಿದೆ. ನಾವು ವರದಿಯನ್ನು ಸರಕಾರಕ್ಕೆ ಒಪ್ಪಿಸಿದ್ದೇವೆ, ಇನ್ನು ಉಳಿದ ಕೆಲಸ ಸರ್ಕಾರಕ್ಕೆ ಬಿಟ್ಟಿದ್ದು ಎಂದು  ನ್ಯಾ.ಕೆ.ಎನ್. ಕೇಶವನಾರಾಯಣ ಅವರು ಹೇಳಿದ್ದಾರೆ. 


ಮಡಿಕೇರಿಯ ವಿನಾಯಕ ಲಾಡ್ಜ್‌ನಲ್ಲಿ 2016ರ ಜುಲೈ 7ರಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಗಣಪತಿ ಶವ ಪತ್ತೆಯಾಗಿತ್ತು. ಆತ್ಮಹತ್ಯೆಗೂ ಮುನ್ನ ಸ್ಥಳೀಯ ಟಿವಿ ಚಾನಲ್‌ಗೆ ಸಂದರ್ಶನ ನೀಡಿದ್ದ ಗಣಪತಿ, ಸಚಿವ ಕೆ.ಜೆ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಹಾಗೂ ಪ್ರಣವ್ ಮೊಹಂತಿ ಕಿರುಕುಳ ನೀಡಿದ್ದರೆಂದು ಆರೋಪಿಸಿದ್ದರು.


ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ವೈಯಕ್ತಿಕ ಕಾರಣಗಳಿಂದ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸಿಐಡಿ ಪ್ರಕರಣ ಮುಕ್ತಾಯಗೊಳಿಸಿತ್ತು.


ವಿರೋಧ ಪಕ್ಷಗಳಿಂದ ಒತ್ತಡ ಹೆಚ್ಚಿದ್ದರಿಂದ ಸರ್ಕಾರ ನ್ಯಾಯಮೂರ್ತಿ ಕೇಶವನಾರಾಯಣ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚನೆ ಮಾಡಿತ್ತು. ಒಂದೂವರೆ ವರ್ಷ ಕಾಲ ವಿಚಾರಣೆ ನಡೆಸಿದ ಆಯೋಗ 49 ಜನರ ಹೇಳಿಕೆ ದಾಖಲಿಸಿಕೊಂಡಿತ್ತು. ಅಗತ್ಯ ಕಾಣದೇ ಇದ್ದುದರಿಂದ ಕೆ.ಜೆ. ಜಾರ್ಜ್, ಎ.ಎಂ. ಪ್ರಸಾದ್ ಹಾಗೂ ಪ್ರಣವ್ ಮೊಹಂತಿ ವಿಚಾರಣೆ ನಡೆಸಿಲ್ಲ ಎಂದು ಆಯೋಗದ ಮೂಲಗಳು ತಿಳಿಸಿದ್ದವು.