ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ರಾತ್ರಿ ದೆಹಲಿಯಲ್ಲಿ ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಳೆದ ನಾಲ್ಕು ದಿನಗಳಿಂದ ಸುದೀರ್ಘ ವಿಚಾರಣೆ ನಡೆಸಿದ ಬಳಿಕ, ಡಿ.ಕೆ.ಶಿವಕುಮಾರ್ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣ ನೀಡಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.  ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಬಂಧನದ ಬೆನ್ನಲ್ಲೇ ಇಡಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದೆ. 


ಗುರುವಾರದಂದು ವಿಚಾರಣೆಗಾಗಿ ದೆಹಲಿಗೆ ಆಗಮಿಸಿದ್ದ ಡಿ.ಕೆ.ಶಿವಕುಮಾರ್ ಅವರು, ವಿಚಾರಣೆ ವೇಳೆ ಬಂಧಿಸದಂತೆ ರಕ್ಷಣೆ ಕೋರಿ ಕರ್ನಾಟಕ ಹೈಕೋರ್ಟ್ ನಲ್ಲಿ ಜ್ಞಾಪನಾ ಪತ್ರವನ್ನೂ ಸಹ ಸಲ್ಲಿಸಿದ್ದರು. ಆದರೆ, ಶುಕ್ರವಾರ ಹೈಕೋರ್ಟ್ ಡಿಕೆಶಿ ಅವರ ಅರ್ಜಿಯನ್ನು ವಜಾಗೊಳಿಸಿತ್ತು.  ಈ ಬೆನ್ನಲ್ಲೇ ಮಂಗಳವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ್ದಾರೆ. 


"ವಿಚಾರಣೆಗಾಗಿಯೇ ದೆಹಲಿಗೆ ಆಗಮಿಸಿದ್ದೇನೆ. ಇಲ್ಲಿ ಸಿಕ್ಕ 8.6 ಕೋಟಿ ರೂ. ನಮ್ಮದೇ. ಈ ಬಗ್ಗೆ ಜಾರಿ ನಿರ್ದೇಶನಾಲಯದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧ, ಯಾವುದೇ ವಿಷಯವನ್ನು ಮರೆಮಾಚುವ ಅಗತ್ಯವಿಲ್ಲ" ಎಂದು ಈ ಹಿಂದೆ ಡಿ.ಕೆ.ಶಿವಕುಮಾರ್ ಹೇಳಿದ್ದರು. ಶುಕ್ರವಾರದಂದು ಡಿಕೆಶಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ತನಿಖಾ ದಳ ಗಣೇಶ ಚತುರ್ಥಿವರೆಗೂ ವಿಚಾರಣೆಯನ್ನು ಮುಂದೂಡಿತ್ತು.


ಈ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಕೆಶಿ, "ನನ್ನ ತಂದೆಗೆ ಪೂಜೆ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ನಾನು ಗಣೇಶನ ಪೂಜೆಯನ್ನು ನನ್ನ ಮಕ್ಕಳೊಂದಿಗೆ ಆಚರಿಸಬೇಕೆಂದಿದ್ದೆ. ಆದರೆ, ಅಧಿಕಾರಿಗಳು ಇದಕ್ಕೆ ಅನುಮತಿ ನೀಡಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದರು.


ಈ ಹಿಂದೆ ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್​ ಅವರಿಗೆ ಸೇರಿದ ಫ್ಲಾಟ್​ಗಳ ಮೇಲೆ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಅಕ್ರಮ ಹಣ ಪತ್ತೆಯಾಗಿತ್ತು. ದಾಳಿ ವೇಳೆ ಐಟಿ ಅಧಿಕಾರಿಗಳು 8.59 ಕೋಟಿ ಹಣ ಜಪ್ತಿ ಮಾಡಿದ್ದರು. ಈ ಸಂಬಂಧ ಜಾರಿ ನಿರ್ದೇಶನಾಲಯದ ನಿರ್ದೇಶಕರು ಡಿ.ಕೆ.ಶಿವಕುಮಾರ್ ಮತ್ತು ನವದೆಹಲಿಯಲ್ಲಿರುವ ಕರ್ನಾಟಕ ಭವನದ ಉದ್ಯೋಗಿ ಹನುಮಂತಯ್ಯ ಅವರ ವಿರುದ್ಧ ಹಣಕಾಸು ಅವ್ಯವಹಾರ ಪ್ರಕರಣವನ್ನು ದಾಖಲಿಸಿಕೊಂಡಿತ್ತು.