ಚಾಮರಾಜನಗರ: ವಿದ್ಯುತ್ ಬಿಲ್ ಪಾವತಿಯಾಗದಿದ್ದರಿಂದ ಐತಿಹಾಸಿಕ ಹಾಗೂ ಚಾಮರಾಜನಗರದ ಆರಾಧ್ಯ ದೈವ ಚಾಮರಾಜೇಶ್ವರನಿಗೆ ಗುರುವಾರ ಕತ್ತಲಲ್ಲಿ ಪೂಜೆ ಸಲ್ಲಿಸಿದ್ದು ಸೆಸ್ಕ್ ನಡೆಗೆ ಆಕ್ರೋಶ ವ್ಯಕ್ತವಾಗಿದೆ. 


COMMERCIAL BREAK
SCROLL TO CONTINUE READING

ನಗರದ ಹೃದಯಭಾಗದಲ್ಲಿರುವ  ಚಾಮರಾಜೇಶ್ವರ ದೇಗುಲದ ವಿದ್ಯುತ್ ಬಿಲ್ಲನ್ನು ಮುಜರಾಯಿ ಇಲಾಖೆಯು ಬಾಕಿ ಉಳಿಸಿಕೊಂಡಿರುವುದರಿಂದ ಸೆಸ್ಕ್ ಸಿಬ್ಬಂದಿ ದೇಗುಲದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು ಭಕ್ತರು ಬ್ಯಾಟರಿ ಬೆಳಕಿನಲ್ಲೇ ದೇವರ ಪ್ರದಕ್ಷಿಣೆ ಬಂದು ದೇವರ ದರ್ಶನ ಮಾಡಿದ್ದಾರೆ. 


ಕಾರ್ತಿಕ ಮಾಸವಾಗಿರುವುದರಿಂದ ಶಿವನ ಭಕ್ತರು ಅದರಲ್ಲೂ ಮಹಿಳೆಯರು ಚಾಮರಾಜೇಶ್ವರನ ದರ್ಶನ ಮಾಡಲು ದಾಂಗುಡಿ‌ ಇಡುತ್ತಿದ್ದರು.‌ ಆದರೆ, ವಿದ್ಯುತ್ ಇಲ್ಲದಿರುವುದರಿಂದ ಮಹಿಳೆಯರು ದೇಗುಲದ ಹೊರಗೆ ಕೈ ಮುಗಿದು ಜಿಲ್ಲಾಡಳಿತದ ವಿರುದ್ಧ ಶಪಿಸುತ್ತಾ ಹೊರನಡೆದಿದ್ದಾರೆ. 


ಇದನ್ನೂ ಓದಿ- ಏಷ್ಯಾದಲ್ಲೇ ಅತಿ ಹೆಚ್ಚು ಎಥನಾಲ್ ಉತ್ಪಾದನೆ ಮಾಡುವ ರಾಜ್ಯ ಕರ್ನಾಟಕ: ವಿಜಯ್‌ ನಿರಾಣಿ


ಈ ಹಿಂದೆಯೂ ವಿದ್ಯುತ್ ಕಡಿತಗೊಳಿಸಲು ಮುಂದಾದ ವೇಳೆ 15 ದಿ‌ನ‌ ಕಾಲಾವಕಾಶ ಪಡೆದು ವಿದ್ಯುತ್ ಪಾವತಿ ಮಾಡಲಾಗಿತ್ತು. ಆದರೆ, ಗುರುವಾರ (ನವೆಂಬರ್ 03)  ಸಂಜೆ 5 ರ ಹೊತ್ತಿಗೆ ವಿದ್ಯುತ್ ಕಡಿತ‌ ಮಾಡಿದ್ದು 60-70 ಸಾವಿರ ರೂ. ವಿದ್ಯುತ್ ಬಿಲ್ ಬಾಕಿ‌ ಇದೆ ಎಂದು ತಿಳಿದುಬಂದಿದೆ.


ಐತಿಹಾಸಿಕ ದೇವಾಲಯ ಹಾಗೂ ಸಹಸ್ರಾರು ಭಕ್ತರ ಶ್ರದ್ಧಾ- ಭಕ್ತಿಯಿಂದ ಭೇಟಿ ಕೊಡುವ ಸ್ಥಳಕ್ಕೆ ಅಧಿಕಾರಿಗಳು ಈ‌ ರೀತಿ ವರ್ತನೆ ತೋರಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. 40 ವರ್ಷಗಳಿಂದ ದೇವಾಲಯದಲ್ಲಿ ಕೆಲಸ ಮಾಡಿಕೊಂಡಿದ್ದು ಇದೇ ಮೊದಲ ಬಾರಿಗೆ ಹೀಗೆ ಕತ್ತಲಲ್ಲಿ ದೇವರಿರುವುದು ಎಂದು ದೇಗುಲದ ನೌಕರ ಮಹಾದೇವಶೆಟ್ಟಿ ಬೇಸರ ಹೊರಹಾಕಿದರು.


ದೇವಾಲಯಕ್ಕೆ ಸೇರಿರುವ ಅಂಗಡಿಗಳಲ್ಲಿ ಬಾಡಿಗೆ ಪಡೆದು ಬೇಕಾದರೆ ವಿದ್ಯುತ್ ಬಿಲ್ ಕಟ್ಟಲಿ, ಬ್ಯಾಟರಿ ಹಿಡಿದುಕೊಂಡು ದೇವರ ದರ್ಶನ ಮಾಡುವ ದುಸ್ಥಿತಿ ಬೇಕೆ..? ಕತ್ತಲು ಆವರಿಸಿರುವುದರಿಂದ ನೂರಾರು ಮಹಿಳೆಯರು ದೇಗುಲಕ್ಕೆ ಒಳಗೆ ಬರದೇ  ಹೊರಗೇ ಕೈ ಮುಗಿದು ಹೊರ ಹೋಗಿದ್ದಾರೆ ಎಂದು ಭಕ್ತರಾದ ಮಹಾದೇವ್ ಆಕ್ರೋಶ ಹೊರಹಾಕಿದ್ದಾರೆ.


ಇದನ್ನೂ ಓದಿ- ಮನೆಯ 2 ಗ್ಯಾಜೆಟ್‌ಗಳನ್ನು ಬದಲಾಯಿಸಿದರೆ ಅರ್ಧಕ್ಕಿಂತ ಕಡಿಮೆ ಆಗುತ್ತೆ ವಿದ್ಯುತ್ ಬಿಲ್


ಒಟ್ಟಿನಲ್ಲಿ ಜನರ ಬದುಕಿಗೆ, ನಂಬಿಕೆಗೆ ಬೆಳಕಾಗಿರುವ ಚಾಮರಾಜೇಶ್ವರನನ್ನೇ ಕತ್ತಲಲ್ಲಿ ಕೂರಿಸಿರುವುದು ನಿಜಕ್ಕೂ ವಿಪರ್ಯಾಸವಾಗಿದೆ, ಆದಷ್ಟು ಬೇಗ ದೇಗುಲಕ್ಕೆ ವಿದ್ಯುತ್ ಸಂಪರ್ಕ ಮತ್ತೇ ಬರಲಿ ಎಂಬುದು ಭಕ್ತರ ಒತ್ತಾಯವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.