ಮೈಸೂರು: "ತಾಕತ್ತಿದ್ದರೆ ಎಲ್ಲ ಬನ್ನಿ. ಯಾರ ಮೇಲೆ ಎಫ್‌ಐಆರ್ ಆಗಿದೆಯೋ ಎಲ್ಲರೂ ರಾಜೀನಾಮೆ ಕೊಡಿ. ವಿಧಾನಸೌಧದ ಮುಂದೆ ಸಾಲಾಗಿ ಬಂದು ರಾಜೀನಾಮೆ ಕೊಡಿ, ಕೊಡ್ತೀರಾ? ರಾಜೀನಾಮೆ ಕೊಡಬೇಕಂತೆ ರಾಜೀನಾಮೆ. ಮಾಡೋಕೆ ಬೇರೆ ಕೆಲಸ ಇಲ್ವ ? ಏನು ಅಭಿವೃದ್ಧಿ ಕಾರ್ಯ ಆಗಬೇಕು ನೋಡಿ. ಕೇಂದ್ರದಿಂದ ಏನು ತರಬೇಕು, ರಾಜ್ಯದಿಂದ ಏನು ಹೋಗಬೇಕು ಅನ್ನೋದು ನೋಡಿ ಎಂದು ಶಾಸಕ ಜಿ.ಟಿ.ದೇವೇಗೌಡರು ಅಚ್ಚರಿಯ ಹೇಳಿಕೆ ನೀಡಿ ಪ್ರತಿಪಕ್ಷಗಳ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಕರ್ನಾಟಕದಲ್ಲಿ ಎಪ್ ಐ ಆರ್ ಪರ್ವ ಶುರುವಾಗಿದೆ. ರಾಜಕೀಯ ಕೆಸರೆರಚಾಟ ಹಾಗೂ ಆರೋಪ ಪ್ರತ್ಯಾರೋಪಗಳು ದಿನ ನಿತ್ಯದ ಸುದ್ದಿಯಾಗುತ್ತಿವೆ. ಎಂದೋ ಆಗಿಹೋದ ಪ್ರಕರಣಗಳನ್ನು ಪ್ರಸ್ತಾಪ ಮಾಡಿ ರಾಡಿ ಎಬ್ಬಿಸುವ ರಾಜಕೀಯ ಮುನ್ನಲೆಗೆ ಬಂದಿದೆ. ವಿವಾದವೊಂದನ್ನು ಕೆದುಕುವುದು, ತನಿಖೆ ಆಗಬೇಕೆಂದು ಹೋರಾಟಕ್ಕಿಳಿಯುವುದು, ಎಫ್ ಐ ಆರ್ ಆಗಲೇಬೇಕೆಂದು ಕೋರ್ಟ ಮೆಟ್ಟಲೇರುವುದು, ಕೊನೆಗೆ ರಾಜೀನಾಮೆ ಕೊಡಲೇಬೇಕೆಂದು ಗದ್ದಲ ಎಬ್ಬಿಸುವುದು. ಇವರ ಆರೋಪಕ್ಕೆ ಪ್ರತಿಯಾಗಿ ಅವರ ಹಗರಣವನ್ನು ಇವರು ಕೆದಕುವುದು. ಇದೇ ರಾಜ್ಯರಾಜಕೀಯದ ದಿನನಿತ್ಯದ ಅನಗತ್ಯ ವಿದ್ಯಮಾನವಾಗಿದೆ. ಮಾಧ್ಯಮದವರಿಗೆ ಪೊಗದಸ್ತಾದ ಆಹಾರವಾಗಿದೆ.


ಹೀಗೆ ಆರೋಪ ಪ್ರತ್ಯಾರೋಪ ಮಾಡುತ್ತಿರುವ ಪ್ರತಿಪಕ್ಷ ಹಾಗೂ ಆಳುವ ಪಕ್ಷಗಳ ಬಹುತೇಕ ನಾಯಕರುಗಳು ಗಾಜಿನ ಮನೆಯಲ್ಲಿರುವವರೇ. ಎಲ್ಲರ ಸುತ್ತಲೂ ಯಾವುದಾದರೊಂದು ಹಗರಣ ಸುತ್ತಿಕೊಂಡಿರುತ್ತದೆ. ಅಧಿಕಾರದ ಪಟ್ಟ ಗಿಟ್ಟಿಸಿಕೊಳ್ಳುವ ದಾರಿಯಲ್ಲಿ ಆರೋಪಗಳ ಮೆಟ್ಟಿಲುಗಳನ್ನು ತುಳಿದೇ ಮೇಲೇರಬೇಕಾಗುವುದು ಪ್ರಸ್ತುತ ರಾಜಕಾರಣದ ಅನಿವಾರ್ಯತೆಯಾಗಿದೆ. 


ಸಾವಿಲ್ಲದ ಮನೆಯ ಸಾಸಿವೆಗೂ ಆರೋಪಗಳಿಲ್ಲದ ರಾಜಕೀಯ ನಾಯಕರ ನೈತಿಕತೆಗೂ ಸಂಬಂಧವಿಲ್ಲದ ಸಂಬಂಧವಿದೆ. ಈ ಹಿಂದೆ ಹೊಂದಾಣಿಕೆ ರಾಜಕೀಯ ಎನ್ನುವುದಿತ್ತು. 'ನಿನ್ನ ವಿರುದ್ಧದ ಪ್ರಕರಣಗಳ ಕುರಿತು ನಾನು ಆರೋಪಿಸುವುದಿಲ್ಲ, ನನ್ನ ಹಗರಣಗಳ ಬಗ್ಗೆ ನೀನು ಮಾತಾಡಬೇಕಿಲ್ಲ' ಎನ್ನುವ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರಲ್ಲಿತ್ತು. ಆದರೆ ಈಗ ಕೇವಲ ಅಕ್ಯೂಜ್ಡ್ ಪಾಲಿಟಿಕ್ಸ್ ಆರಂಭವಾಗಿದೆ. ಇವರ ಕಳ್ಳತನದ ಬಗ್ಗೆ ಅವರು, ಅವರ ಲೂಟಿಯ ಕುರಿತು ಇವರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ಹಗರಣಗಳ ತಿಪ್ಪೆ ಕೆದಕಿ ದುರ್ವಾಸನೆಯನ್ನು ನಾಡಿನಾದ್ಯಂತ ಹರಡುತ್ತಿದ್ದಾರೆ.


ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರ ರಾಜಕೀಯ ಎದುರಾಳಿಯಾಗಿರುವ ಜಿ.ಟಿ.ದೇವೇಗೌಡರು ಪ್ರಸ್ತುತ ರಾಜೀನಾಮೆ ನಾಟಕದ ಕುರಿತು ಸರಿಯಾದ ಮಾತುಗಳನ್ನೇ ಹೇಳಿದ್ದಾರೆ. ಅವರ ಹೇಳಿಕೆಯ ಹಿಂದೆ ಅವರದೇ ಪಕ್ಷದ ಅದ್ವಿತೀಯ ನಾಯಕ ಕುಮಾರಸ್ವಾಮಿಯವರ ಮೇಲಿನ ಅಸಮಾಧಾನವೂ ಕಾರಣವಾಗಿರಬಹುದು. ಆದರೆ  ಅವರು ಹೇಳಿದ್ದರಲ್ಲಿ ತಪ್ಪೇನಿಲ್ಲ. ಆರೋಪ ಪ್ರತ್ಯಾರೋಪಗಳಲ್ಲಿ ರಾಜ್ಯದ ಜನರ ಹಿತಾಸಕ್ತಿಯನ್ನೇ ಮರೆತಿದ್ದು ರಾಜೀನಾಮೆ ಪ್ರಹಸನಗಳು ಅಭಿವೃದ್ದಿಗೆ ಮಾರಕವಾಗಿವೆ. ಆರೋಪ ಬಂದಾಗಲೆಲ್ಲಾ, ಎಫ್ ಐ ಆರ್ ದಾಖಲಾದವರೆಲ್ಲಾ ರಾಜೀನಾಮೆ ಕೊಡುವುದೇ ಆದರೆ ರಾಜಕೀಯದಲ್ಲಿ ಬಹುತೇಕರು ಇರಲು ಸಾಧ್ಯವೇ ಇಲ್ಲವೆಂಬ ಸತ್ಯವನ್ನೇ ಜಿಟಿಡಿ ಯವರು ಹೇಳಿದ್ದಾರೆ.


ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ 543 ಸಂಸದರಲ್ಲಿ 251 ಎಂಪಿ ಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳವೆ. ಇವರಲ್ಲಿ 131 ಸಂಸದರ ಮೇಲೆ ಕೊಲೆ, ಅತ್ಯಾಚಾರ, ಸುಲಿಗೆ, ಅಪಹರಣದಂತಹ ಗಂಭೀರ ಕೇಸುಗಳಿವೆ. ಆರೋಪಿತರು ಹಾಗೂ FIR ದಾಖಲಿತರೆಲ್ಲಾ ರಾಜೀನಾಮೆ ಕೊಡಬೇಕು ಎಂಬ ಕಾನೂನು ಜಾರಿಯಾದರೆ ಸಂಸತ್ತಿನಲ್ಲಿ ಅರ್ಧಕ್ಕರ್ಧ ಸಂಸದರು ರಾಜೀನಾಮೆ ಕೊಡಬೇಕಾಗುತ್ತದೆ. ರಾಜ್ಯದ ರಾಜಕಾರಣದಲ್ಲೂ ಪರಿಸ್ಥಿತಿ ಇದಕ್ಕಿಂತಾ ಭಿನ್ನವಾಗೇನೂ ಇಲ್ಲ. 


ಹೀಗಾಗಿಯೇ ಜಿ.ಟಿ.ದೇವೇಗೌಡರು 'ತಾಕತ್ತಿದ್ದರೆ ಎಫ್ ಐ ಆರ್ ಆದವರೆಲ್ಲಾ ರಾಜೀನಾಮೆ ಕೊಡಿ' ಎಂದು ಗುಡುಗಿದ್ದಾರೆ. ಅವರ ಈ ಹೇಳಿಕೆಯ ಹಿಂದಿನ ಉದ್ದೇಶ ಅದೇನೇ ಇರಲಿ ಅವರ ಮಾತುಗಳಲ್ಲಿ ಜನರ ದ್ವನಿಯೂ ಅಡಗಿದೆ. ಈ ಹಗರಣಗಳ ತನಿಖೆಯನ್ನು ತನಿಖಾ ಸಂಸ್ಥೆಗಳಿಗೆ ವಹಿಸಿ, ವಿಚಾರಣೆಗಳನ್ನು ನ್ಯಾಯಾಲಯಗಳಿಗೆ ಬಿಟ್ಟು ಅಭಿವೃದ್ದಿಯ ಕಡೆಗೆ ಆಳುವಪಕ್ಷ ಹಾಗೂ ವಿಪಕ್ಷಗಳು ಗಮನ ಹರಿಸುವುದು ಇಂದಿನ ಅಗತ್ಯ ಹಾಗೂ ಜನತೆಯ ಅಪೇಕ್ಷೆಯಾಗಿದೆ. ಆಳುವ ಸರಕಾರವನ್ನು ಹೇಗಾದರೂ ಮಾಡಿ ಕೆಳಗಿಳಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿಗರು ಹಾಗೂ ಹೇಗಾದರೂ ಮಾಡಿ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಬೇಂದು ಜೆಡಿಎಸ್ ನ ಕುಮಾರಸ್ವಾಮಿಗಳು ಪ್ರಯತ್ನಿಸುತ್ತಲೇ ಇವೆ. ಗಾಜಿನ ಮನೆಯಲ್ಲಿರುವ ಈ ನಾಯಕರು ತಮ್ಮ ಮೇಲಿರುವ ಹಗರಣಗಳ ಕುರಿತ ತನಿಖೆ, ವಿಚಾರಣೆಗಳನ್ನು ಬದಿಗಿರಿಸಿದ್ದಾರೆ. ಇದೆಲ್ಲವನ್ನೂ ಬಿಟ್ಟು ಜಿ.ಟಿ.ದೇವೇಗೌಡರು ಹೇಳಿದಂತೆ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಾದ ಪಾಲನ್ನು ತರುವುದರತ್ತ ಕೇಂದ್ರ ಸಚಿವ ಕುಮಾರಸ್ವಾಮಿಯವರು ಪ್ರಯತ್ನಿಸಬೇಕಾಗಿದೆ. ಆಳುವ ಸರಕಾರಕ್ಕೆ ಸಕಾರಾತ್ಮಕ ಸಲಹೆಗಳನ್ನು ಕೊಡುವ ಮೂಲಕ ವಿರೋಧ ಪಕ್ಷದವರು ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ. ಆಳುವ ಸರಕಾರ ಈ ಹಗರಣಗಳಾಚೆ ನಾಡಿನ ಅಭಿವೃದ್ದಿ ಹಾಗೂ ಜನರ ಹಿತಾಸಕ್ತಿ ಕುರಿತ ಯೋಜನೆಗಳ ಪ್ರಮಾಣಿಕ ಅನುಷ್ಟಾನಕ್ಕೆ ಪ್ರಯತ್ನಿಸಬೇಕಿದೆ. ಇಲ್ಲದೇ ಹೋದರೆ ಎಲ್ಲರೂ ಸಾಮೂಹಿಕ ರಾಜೀನಾಮೆ ಕೊಟ್ಟು ಮುಂದಿನ ತಲೆಮಾರಿನ ಯುವಕರಿಗೆ ದಾರಿಮಾಡಿಕೊಟ್ಟು ಹೋಗಬೇಕಿದೆ. ಮತ್ತೆ ನಿಜವಾದ ಅರ್ಥದ ನೈತಿಕ ರಾಜಕಾರಣ, ಮೌಲ್ಯಾಧಾರಿತ ಆಡಳಿತ ವ್ಯವಸ್ಥೆ ಬರಬೇಕಿದೆ.


- ಶಶಿಕಾಂತ ಯಡಹಳ್ಳಿ (ಅಂಕಣಕಾರರು) 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.