ರಾಮನಗರ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧದ ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಂಡ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರದಲ್ಲಿ ವಕೀಲರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಕಳ್ಳಕಾಕರ ರಕ್ಷಣೆಗೆ ಈ ಸರ್ಕಾರ ಇದೆ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ’ ಎಂದು ಕಿಡಿಕಾರಿದರು.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಸಿದ್ದರಾಮಯ್ಯ ವಕೀಲರಾಗಿ, ವಕೀಲ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಆದರೆ ಅವರ ನೇತೃತ್ವದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಸರಿಯಲ್ಲ. ಸುಪ್ರೀಂಕೋರ್ಟ್ ನೀಡಿರುವ ಹಲವಾರು ತೀರ್ಪುಗಳು ನಮ್ಮ ಕಣ್ಣಮುಂದೆ ಇವೆ. ಈಗಾಗಲೇ ಇದೇ ವಿಷಯವಾಗಿ 2 ಬಾರಿ ಹೈಕೋರ್ಟ್ ನಲ್ಲಿ ಚರ್ಚೆ ವಿಚಾರಣೆ ನಡೆದು ಆದೇಶಗಳು ಬಂದಿವೆ. ಸಿಬಿಐ ತನಿಖೆ ರದ್ದು ಕೋರಿ ಶಿವಕುಮಾರ್ ಅವರು 2 ಸಲ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿಲ್ಲ. ಇದು ಸಿಎಂಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.


ಇದನ್ನೂ ಓದಿ: ಬೆಂಗಳೂರಲ್ಲಿ ಕಂಬಳ ಉತ್ಸವ : ರಾಜಧಾನಿ ಪ್ರವೇಶಿಸಲಿವೆ 200 ಕೋಣಗಳು


ಇಂತಹ ಸೂಕ್ಷ್ಮ ವಿಚಾರ ನ್ಯಾಯಾಲಯದ ಮುಂದೆ ಇದ್ದಾಗ ಸರ್ಕಾರ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿರುವುದು  ತಪ್ಪು. ಕಾನೂನನ್ನು ಧಿಕ್ಕರಿಸಿದವರು ಇವರು. ನಾವು ಕಾನೂನಿಗಿಂತ ದೊಡ್ಡವರು ಎಂಬುದನ್ನು ಅವರು ಪ್ರದರ್ಶನ ಮಾಡಿಕೊಂಡಿದ್ದಾರೆ. ಬಡವರಿಗೆ ರಕ್ಷಣೆ ಇಲ್ಲ, ಲೂಟಿ‌ ಮಾಡುವವರಿಗೆ ಕೊಳ್ಳೆ ಹೊಡೆಯುವವರ ಪರವಾಗಿ ಸರ್ಕಾರ ಇದೆ ಎಂಬುದನ್ನು ಇವರು  ನಿರೂಪಿಸಿದ್ದಾರೆ ಎಂದು ಎಚ್‍ಡಿಕೆ ಕಿಡಿಕಾರಿದರು.


ಡಿಸಿಎಂ ಬಗ್ಗೆ ಎಚ್‍ಡಿಕೆ ವ್ಯಂಗ್ಯ!


ಸಂಪುಟ ಸಭೆಯಿಂದ ಹೊರಗುಳಿದ ಡಿಕೆಶಿ ಬಗ್ಗೆ ವ್ಯಂಗ್ಯವಾಡಿದ ಮಾಜಿ ಸಿಎಂ ಎಚ್‍ಡಿಕೆ, ಡಿಸಿಎಂ ಎಂತಹ ದೊಡ್ಡತನ ತೋರಿಸಿದ್ದಾರೆ ಅಂದರೆ ತಮ್ಮ ಕೇಸಿನ  ವಿಚಾರ ಕ್ಯಾಬಿನೆಟ್ ನಲ್ಲಿ ಚರ್ಚೆ ಆಗುತ್ತದೆ ಎಂದು ಅವರು ಕ್ಯಾಬಿನೆಟ್ ಸಭೆಯಿಂದ ಹೊರಗೆ ಉಳಿದಿದ್ದರು. ಪಾಪ.. ಅವರು ಸಂಪುಟ ಸಭೆಗೂ ಹೋಗಿಲ್ಲ. ಅವರ ಸಹಕಾರಕ್ಕೆ ಅಭಿನಂದಿಸಲೇಬೇಕು ಎಂದು ಟಾಂಗ್ ನೀಡಿದರು.


ಡಿಸಿಎಂ ಅವರು ಕಳೆದ 3 ದಿನಗಳ ಹಿಂದೆ ಹಿರಿಯ ವಕೀಲರ ಸಭೆ ಕರೆದು, ಈ ಕೇಸಿನಿಂದ ಯಾವ ರೀತಿ ರಕ್ಷಣೆ ಪಡೆಯಬೇಕು ಎಂದು ಚರ್ಚೆ ಮಾಡಿದ್ದಾರೆ. ನಮಗೆ ಎಲ್ಲಾ ಮಾಹಿತಿ ಇದೆ. ಮೊನ್ನೆಯೇ ಈ ವಿಚಾರ ನನ್ನ ಗಮನಕ್ಕೆ ಬಂತು. ಸಂಪುಟ ಸಭೆಯ ತೀರ್ಮಾನ, ಈ ನಡವಳಿಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತದೆ. ಈ ವಿಚಾರವನ್ನು ಮುಂದಿನ ಸದನದಲ್ಲಿ ಚರ್ಚೆ ಮಾಡೋಣ ಎಂದರು.


ರಾಜ್ಯ ಸರ್ಕಾರದ ಮೇಲೆ ಡಿಕೆಶಿ ಒತ್ತಡ ಹಾಕಿದ್ದಾರಾ? ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, ಇಲ್ಲಿ ಒತ್ತಡದ ಪ್ರಶ್ನೆ ಅಲ್ಲ, ಸರ್ಕಾರ ಇರೋದು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡುವುದಕ್ಕೆ. ತಿಳುವಳಿಕೆ ಇರುವವರೇ ಇಂತಹ ನಿರ್ಣಯ ಮಾಡಿರೋದು ಸರ್ಕಾರಕ್ಕೆ ಛೀಮಾರಿ ಹಾಕಿದಂತೆ ಇದೆ ಇದು. ಒಂದು ಬಾರಿ ಆದೇಶ ಮಾಡಿದ ಮೇಲೆ ಬದಲಾವಣೆ ಮಾಡಲು ಆಗುವುದಿಲ್ಲ ಎಂದರು.


ಇದನ್ನೂ ಓದಿ: ಸಮಯಕ್ಕೆ ಸರಿಯಾಗಿ ಬಸ್‌ ಬಾರದ ಹಿನ್ನಲೆ ಲಕ್ಕುಂಡಿಯಲ್ಲಿ ಪ್ರತಿಭಟನೆ


ಅಕ್ರಮ ಆಸ್ತಿ ಕೇಸನ್ನು ಸಿಬಿಐನಿಂದ ವಾಪಸ್ ಪಡೆದು ಲೋಕಾಯುಕ್ತ ಅಥವಾ ಸ್ಥಳೀಯ ಪೊಲೀಸರಿಂದ ತನಿಖೆ ಮಾಡಲು ಆಗುತ್ತದೆಯೇ? ಲೋಕಾಯುಕ್ತ ಅಥವಾ ಪೊಲೀಸರು ಈ ತನಿಖೆ ಮಾಡಲು ಸಾಧ್ಯವೇ? ಹಿಂದಿನ ಸರ್ಕಾರವು ಸಿಬಿಐಗೆ ವಹಿಸಲು ಸ್ಪೀಕರ್ ಅನುಮತಿ ಪಡೆದಿರಲಿಲ್ಲ ಎನ್ನುವುದಾದರೆ, ಇವರು ಸ್ಪೀಕರ್ ಅವರಿಂದ ಅನುಮತಿ ಪಡೆದಿದ್ದಾರಾ? ಇದೆಲ್ಲಾ ಕೇವಲ ಸಬೂಬುಗಳು ಮಾತ್ರ. ತನಿಖೆ ಮುಂದುವರಿಸಿ ಎಂದು ಈಗಾಗಲೇ ಕೋರ್ಟ್ ಆದೇಶ ಆಗಿದೆ. ಈಗ ಸ್ಪೀಕರ್ ಅನುಮತಿ ಪಡೆದರೂ ಸಿಬಿಐನಿಂದ ಕೇಸ್ ವಾಪಸ್ ಪಡೆಯಲು ಆಗುತ್ತಾ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಗರೆದರು.


ಇದೇ ಸಿದ್ದರಾಮಯ್ಯನವರು 5 ವರ್ಷ ಸಿಎಂ ಆಗಿದ್ದಾಗ, ಲೋಕಾಯುಕ್ತ ರದ್ದು ಮಾಡಿ, ಎಸಿಬಿ ರಚನೆ ಮಾಡಿ ಎಲ್ಲಾ ಅಕ್ರಮಗಳನ್ನು ಮುಚ್ಚಿ ಹಾಕಿದರು. ಇಂತಹ ಕೆಲಸದಲ್ಲಿ ಸಿದ್ದರಾಮಯ್ಯ ನಿಪುಣರು. ಈ ಬಗ್ಗೆ ಅವರಿಗೆ ಬಹಳ ಅನುಭವ ಇದೆ. ಹಾಗಾಗಿ ಕಾನೂನು ವ್ಯವಸ್ಥೆಯಲ್ಲಿ ಹೊಸ ಹೆಜ್ಜೆ ಹಾಕಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.