ಬೆಂಗಳೂರು: ಇಡೀ ಜಗತ್ತಿಗೇ ಕಂಟಕ ಪ್ರಾಯವಾಗಿ ಕಾಡುತ್ತಿರುವ ಕರೋನಾವೈರಸ್ ಕೋವಿಡ್- 19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಕೊಂಡಿರುವ ರಾಜ್ಯ ಸರಕಾರವು 2019-20ನೇ ಸಾಲಿನಲ್ಲಿ ಎಂಜಿನಿಯರಿಂಗ್ ಸೇರಿ ಇತರ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಸಕ್ತ ಶೈಕ್ಷಣಿಕ ವರ್ಷದ ಅಂತಿಮ ಸೆಮಿಸ್ಟರ್‌ ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಯುಜಿಸಿ ಮಾರ್ಗಸೂಚಿ ಅನ್ವಯ ಸೆಪ್ಟೆಂಬರ್ ಅಂತ್ಯದೊಳಗೆ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಜೊತೆಗೆ  ಮಧ್ಯಂತರ ಸೆಮಿಸ್ಟರ್ (Intermediate Semester) ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆ ಇಲ್ಲದೆಯೇ ಮುಂದಿನ ಹಂತಕ್ಕೆ ಉತ್ತೀರ್ಣಗೊಳಿಸುವುದಾಗಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಖಾಸಗಿ ಶಾಲಾ ಶುಲ್ಕ ಮನ್ನಾ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?


ಶಿಕ್ಷಣ ತಜ್ಞರು, ವಿವಿಗಳ ಕುಲಪತಿಗಳೊಂದಿಗೆ ನಿರಂತರ ಸಮಾಲೋಚನೆ ನಡೆಸಿ ಸಾಧಕ-ಬಾಧಕಗಳನ್ನು ಪರಿಗಣಿಸಿ ವಿದ್ಯಾರ್ಥಿಗಳ ಅರೋಗ್ಯ ಹಾಗೂ ಅವರ ಮುಂದಿನ ಭವಿಷ್ಯದ ದೃಷ್ಟಿಯಿಂದ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ತೀರ್ಮಾನವನ್ನು ಕೈಗೊಳ್ಳುವ ಮುನ್ನ ಯುಜಿಸಿ ಮಾಡಿರುವ ಶಿಫಾರಸುಗಳು ಹಾಗೂ ಅದರ ನಿಯಮಾವಳಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ (2019-20) ಮಾತ್ರ ಸೀಮಿತವಾಗಿರುತ್ತದೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ  ಡಾ. ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayana)  ತಿಳಿಸಿದ್ದಾರೆ.


ಎಂಜಿನಿಯರಿಂಗ್ ಸೇರಿ ಇತರ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ  ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜೂಭಾಯಿ ವಾಲ ಅವರು ಹಸಿರು ನಿಶಾನೆ ತೋರಿಸಿದ್ದಾರೆ ಎಂದವರು ತಿಳಿಸಿದರು.


ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ಮತ್ತು ಅವರ ಉದ್ಯೋಗ- ಮತ್ತಿತರ ಭವಿಷ್ಯಕ್ಕೆ ಧಕ್ಕೆಯಾಗದಂತೆ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಉನ್ನತ ಶಿಕ್ಷಣ ಪದ್ಧತಿಯಲ್ಲಿ ಶೈಕ್ಷಣಿಕ ಮೌಲ್ಯಮಾಪನ ಅಗತ್ಯ. ಆದ್ದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷಮತೆಯನ್ನು ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಉದ್ಯೋಗದಾತ ಕಂಪನಿಗಳು ಕೂಡ ಉದ್ಯೋಗಾಕಾಂಕ್ಷಿಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಅವರು ಗಳಿಸಿರುವ ಶ್ರೇಣಿಯನ್ನು ಗುರುತಿಸುತ್ತವೆ. ಇವರಿಗೆ ಪರೀಕ್ಷೆ ನಡೆಸದಿದ್ದರೆ ಭವಿಷ್ಯದಲ್ಲಿ ತೊಂದರೆಯಾಗುವುದು ಖಚಿತ. ಹೀಗಾಗಿ ಈ ಪರೀಕ್ಷೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಎಲ್ಲ ವಿವಿಗಳಿಗೆ ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.