ಬೆಂಗಳೂರು: ಅಂತರ್ ವಿವಿ ಖೇಲೋ ಇಂಡಿಯಾ ಚಾಂಪಿಯನ್‌ಶಿಪ್‌ ವಿಜೇತರಾದ ಬೆಂಗಳೂರು ಸೆಂಟ್ರಲ್‌ ವಿವಿ ವಿದ್ಯಾರ್ಥಿಗಳಿಗೆ  ಶುಲ್ಕ ರಿಯಾಯಿತಿ, ತಲಾ 25 ಸಾವಿರ ರೂ. ಬಹುಮಾನ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ  ವೆಚ್ಚವನ್ನು ವಿಶ್ವವಿದ್ಯಾಲಯವೇ ಭರಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ  ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ(Dr CN AshwathNarayana)  ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಅಂತರ್ ವಿಶ್ವವಿದ್ಯಾಲಯದ ಖೇಲೋ ಇಂಡಿಯಾ ಚಾಂಪಿಯನ್‌ಶಿಪ್‌ನ ವಿಜೇತರನ್ನು ಸನ್ಮಾನಿಸಿ, ಮಾತನಾಡಿದ ಸಚಿವರು,
"ಈ ಮೊದಲು ವಿಶ್ವವಿದ್ಯಾಲಯಗಳು ಕ್ರೀಡೆ ವಿಷಯದಲ್ಲಿ ಹೆಸರು ಮಾಡುತ್ತಿರಲಿಲ್ಲ. ಖೇಲೋ ಇಂಡಿಯಾದ ಮೊದಲ ಚಾಂಪಿಯನ್‌ಶಿಪ್‌ನಲ್ಲೇ ಬೆಂಗಳೂರಿನ ವಿದ್ಯಾರ್ಥಿಗಳು ಗೆದ್ದು ಅಭಿಮಾನ ಮೂಡಿಸಿದ್ದಾರೆ.  


ಇಡೀ ಕ್ರೀಡಾ ಸಮುದಾಯಕ್ಕೆ ಇದು ಹೆಮ್ಮೆಯ ವಿಷಯ.  ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬೆಂಗಳೂರು ಸೆಂಟ್ರಲ್‌ ವಿವಿ ಕುಲಪತಿ ಡಾ. ಜಾಫೆಟ್‌, ಸೆನೆಟ್‌ ಸದಸ್ಯರು, ರಿಜಿಸ್ಟ್ರಾರ್‌, ಆಡಳಿತ ಮಂಡಳಿಯ ಪ್ರೋತ್ಸಾಹ ದೊಡ್ಡದು. ಅಲ್‌ ಅಮೀನ್‌ ಕಾಲೇಜಿನ ಸಂಸ್ಥಾಪಕರ ಬೆಂಬಲ ಶ್ಲಾಘನೀಯ.  ವಿಜೇತರಿಗೆ ಶುಲ್ಕ ರಿಯಾಯಿತಿ, ಬಹುಮಾನ ಘೋಷಿಸಿ ಹುರಿದುಂಬಿಸಿದ್ದಾರೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


"ಇಡೀ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಇರುವುದು ಕ್ರೀಡೆಗೆ. ಮೈದಾನದಲ್ಲಿ ಜಾತಿ, ಮತ, ಧರ್ಮ, ಅಂತಸ್ತಿನ ವ್ಯತ್ಯಾಸ ಕಾಣದು. ಅಷ್ಟೇ ಏಕೆ ದೇಶಗಳ ನಡುವಿನ ಬಾಂಧವ್ಯ ವೃದ್ಧಿಸುವ ಶಕ್ತಿ ಕ್ರೀಡೆಗಿದೆ.  ಫುಟ್ಬಾಲ್‌ ಕ್ರೀಡೆ ಮೂಲಕ ದಕ್ಷಿಣ ಆಫ್ರಿಕಾದ ಮುಖಂಡ ನೆಲ್ಸನ್‌ ಮಂಡೇಲಾ ದೇಶವನ್ನೇ ಒಗ್ಗೂಡಿಸುವ ಪ್ರಯತ್ನ ಮಾಡಿದ್ದರು. ಕ್ರೀಡೆ ಯಾವುದೇ ನೆಲಕ್ಕೆ ಸೀಮಿತವಲ್ಲ. ಯಾವುದೇ ವ್ಯಕ್ತಿಗೆ ಆನಂದ, ಪರಿಪೂರ್ಣತೆ ಕೊಡುವ ಶಕ್ತಿ ಕ್ರೀಡೆಗಿದೆ. ಸಮಾಜದ ಹಲವು ಸಮಸ್ಯೆಗಳಿಗೆ ಕ್ರೀಡೆಯೇ ಮದ್ದು," ಎಂದು ಅವರು ಹೇಳಿದರು.


"ಆಡುವವರು ಓದುವುದಿಲ್ಲ ಎಂಬ ಮಾತಿದೆ. ಆದರೆ, ನನ್ನ ಗಮನಕ್ಕೆ ಬಂದಿರುವಂತೆ ಕ್ರೀಡೆಯಲ್ಲಿ ಮೇಲುಗೈ ಸಾಧಿಸಿದವರೇ ಶೈಕ್ಷಣಿಕವಾಗಿಯೂ ಸಾಧನೆ ಮಾಡಿರುತ್ತಾರೆ.  ಕ್ರೀಡೆಗೆ ಹೆಚ್ಚು ಒತ್ತು ಕೊಟ್ಟಾಗ ಮಾತ್ರ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ," ಎಂದು ಡಾ.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.