ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಾಲದ ಸುಳಿಗೆ ಸಿಲುಕಿ  ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಸಣ್ಣ ನೀರಾವರಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಒಂದೇ ಕುಟುಂಬದ ನಾಲ್ಕು ಜನರು ಸಾವಿಗೀಡಾಗಿರುವುದರಿಂದ ಪರಿಹಾರ ಯಾರಿಗೆ ನೀಡಬೇಕು ಎಂದು ಪರಿಶೀಲಿಸಿ, ಮೃತ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಯವರಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.


ಮೃತ ರೈತ ನಂದೀಶ್ ಮುಖ್ಯಮಂತ್ರಿಯ ಜನತಾ ದರ್ಶನದಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಮುಖ್ಯ ಮಂತ್ರಿಯವರ ಸೂಚನೆ ಮೇರೆಗೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ನನ್ನ ಜವಾಬ್ದಾರಿ ಅರಿತು, ಧೈರ್ಯ ತುಂಬುವ ಕೆಲಸವನ್ನು ಸಹ ಹಲವು ಬಾರಿ ಮಾಡಲಾಗಿತ್ತು. ಆದರೂ ದುರದೃಷ್ಟಕರ ರೈತ ತನ್ನ ಕುಟುಂಬದ ಸಮೇತ ಸಾವಿಗೆ ಶರಣಾಗಿರುವುದು ಬಹಳ ದುಃಖದ ವಿಷಯ ಎಂದು ಸಚಿವರು ತಿಳಿಸಿದ್ದಾರೆ.


ಕೆಲವು ಸುದ್ದಿ ವಾಹಿನಿಗಳಲ್ಲಿ ರೈತ ಕುಟುಂಬಕ್ಕೆ ಪರಿಹಾರ ನೀಡಲು ಮಂಡ್ಯ ಉಸ್ತುವಾರಿ ಸಚಿವರು ವಿಳಂಬ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇದು ಸತ್ಯಕ್ಕೆ ದೂರವಾದ ವಿಷಯವಾಗಿದ್ದು, ಮೃತ ರೈತ ಕುಟುಂಬದಕ್ಕೆ ಎಲ್ಲಾ ರೀತಿಯ ಸಹಕಾರವನ್ನು  ನೀಡಲು ಸರ್ಕಾರ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.