ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ಡೆ ವಿರೋಧಿಸಿ ರೈತರಿಂದ ಜಾಥಾ
ನವೆಂಬರ್ 26 ರಂದು ನಡೆಯಲಿರುವ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಬೆಳವಣಿಕಿ ಗ್ರಾಮದಿಂದ ರೈತ ಮತ್ತು ಕಾರ್ಮಿಕರ ಜಾಥಾಗೆ ಚಾಲನೆ ನೀಡಲಾಯಿತು.
ಗದಗ: ನವೆಂಬರ್ 26 ರಂದು ನಡೆಯಲಿರುವ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಬೆಳವಣಿಕಿ ಗ್ರಾಮದಿಂದ ರೈತ ಮತ್ತು ಕಾರ್ಮಿಕರ ಜಾಥಾಗೆ ಚಾಲನೆ ನೀಡಲಾಯಿತು.
ಜಾಥಾಗೆ ಚಾಲನೆ ನೀಡಿ ಮಾತನಾಡಿದ ಸಿಐಟಿಯು ನ ಜಿಲ್ಲಾ ಮುಖಂಡರಾದ ಮಹೇಶ್ ಹಿರೇಮಠ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದರು.ರೈತ ಕೂಲಿಕಾರ್ಮಿಕರ ವಿರೋಧಿ ಭೂ ಸುಧಾರಣಾ ಕಾಯ್ದೆ, ಬೀಜ ಮುಂತಾದ ಕೃಷಿ ಸಂಬಂಧಿ ಕಾನೂನು ತಿದ್ದುಪಡಿಗಳನ್ನು ಕೈಬಿಡಬೇಕು, ಜೊತೆಗೆ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಸಹಿತ ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡರಾದ ಸಂಕಪ್ಪ ಕುರಹಟ್ಟಿ ಮಾತನಾಡಿ ಬಿಜೆಪಿ ಸರ್ಕಾರಕ್ಕೆ ಕೇವಲ ಧರ್ಮವೊಂದೇ ರಾಜಕೀಯ ಬಂಡವಾಳವಾಗಿದೆ. ರೈತ ಕೃಷಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚಿಂತಿಸದೆ ಕೇವಲ ಜಾತಿ ಧರ್ಮದ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ಅಷ್ಟೇ ಇಲ್ಲದೆ ಇವತ್ತು ಸಾರ್ವಜನಿಕ ವಲಯಗಳಾಗಿರುವ ಬ್ಯಾಂಕ್, ಸಾರಿಗೆ ವಿಮೆ, ಟೆಲಿಕಾಂ,ಶಿಕ್ಷಣದಂತಹ ವಲಯಗಳನ್ನು ಸರ್ಕಾರ ನಿರ್ಲಕ್ಷಿಸುವ ಮೂಲಕ ಅವುಗಳನ್ನು ಖಾಸಗಿಕರಣ ಮಾಡುತ್ತಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ಈ ಜಾಥಾ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಮೈಲಾರಪ್ಪ ಮಾದರ, ಮಾರುತಿ ಸೆಗಣಿ, ಹಣಮಂತಪ್ಪ ತಾಳಿ, ಬಸಪ್ಪ ಸೆಗಣಿ, ಹಾಗೂ ಡಿವೈಎಫ್ಐ, ಸಿಐಟಿಯುನ ನಾಯಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.