ರೈತನ ಕೂಗಿಗೆ ಕರುನಾಡು ಸ್ತಬ್ದ: ಕೃಷಿ ವಿಧೇಯಕ ವಿರೋಧಿಸಿದ ಬಂದ್ ಗೆ ಭಾರಿ ಬೆಂಬಲ
ಕೃಷಿ ವಿಧೇಯಕ ಗಳನ್ನು ಜಾರಿಗೊಳಿಸಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ ರಾಜ್ಯವ್ಯಾಪಿ ನೀಡಿರುವ ಬಂದ್ ಕರೆಗೆ ಭಾರಿ ಬೆಂಬಲ ವ್ಯಕ್ತವಾಗಿದೆ.ರೈತರು, ಕಾರ್ಮಿಕರು ಪಕ್ಷಬೇದವೆನ್ನದೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಕೃಷಿ ವಿಧೇಯಕಗಳನ್ನು ಜಾರಿಗೊಳಿಸಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ ರಾಜ್ಯವ್ಯಾಪಿ ನೀಡಿರುವ ಬಂದ್ ಕರೆಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ರೈತರು, ಕಾರ್ಮಿಕರು ಪಕ್ಷ ಬೇಧವೆನ್ನದೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್, ಬೆಂಗಳೂರಿನಲ್ಲಿ ಬಿಗಿ ಭದ್ರತೆ
ಭೂಸುಧಾರಣೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರಕ್ಕೆ ನೈತಿಕತೆ ಇಲ್ಲ: ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಟೌನ್ ಹಾಲ್ ನಲ್ಲಿ ಜಮಾಹಿಸಿದ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಯನ್ನು ಕೂಗಿ ರೈತ ವಿರೋಧಿಯಾಗಿರುವ ಕೃಷಿ ವಿಧೇಯಕಗಳನ್ನು ವಾಪಸ್ ತೆಗೆದುಕೊಳ್ಳಬೇಕೆಂದು ನಗರದಲ್ಲಿನ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಮೆರವಣಿಗೆಯನ್ನು ನಡೆಸಿದರು. ಇನ್ನೊಂದೆಡೆ ರೈತರ ಕೂಗಿಗೆ ಬೆಂಬಲ ವ್ಯಕ್ತಪಡಿಸಿ ನಗರದಲ್ಲಿ ಅಂಗಡಿ ಮುಗ್ಗುಟ್ಟುಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಲಾಗಿತ್ತು.
ಕೇವಲ ಬೆಂಗಳೂರು ನಗರ ಮಾತ್ರವಲ್ಲದೆ ಇಡೀ ರಾಜ್ಯಾದ್ಯಂತ ರೈತರ ಪ್ರತಿಭಟನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಧಾರವಾಡದಲ್ಲಿ ರೈತರು ಅರೆಬೆತ್ತಲೆ ಮೆರವಣಿಗೆ ಮೂಲಕ ಸರ್ಕಾರದ ಮಸೂದೆ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರೆ, ಶಿವಮೊಗ್ಗದಲ್ಲಿಯೂ ಕೂಡ ರೈತರು ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಎಲ್ಲಾ ರೈತಪರ ಸಂಘಟನೆಗಳು ಹಾಗೂ ದಲಿತಪರ ಸಂಘಟನೆಗಳು ಕರ್ನಾಟಕ ಬಂದ್ ಆಚರಿಸಿದವು.ಈ ವಿವಾದಾತ್ಮಕ ರೈತ ವಿರೋಧಿ ವಿಧೇಯಕವನ್ನು ಹಿಂಪಡೆಯಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದವು. ಪ್ರತಿಭಟನೆ ಇದೇ ವೇಳೆ ಬೆಳವಣಿಕಿ ಗ್ರಾಮದ ಸಮುದಾಯ ಘಟಕದಿಂದ ಕ್ರಾಂತಿಗೀತೆಗಳು ಮೊಳಗಿದವು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸಂಕಪ್ಪ ಕುರಹಟ್ಟಿ, ಮೈಲಾರಪ್ಪ ಮಾದರ, ಮಾರುತಿ ಶೆಗಣಿ, ಕೃಷ್ಣಪ್ಪ ಮಾಡೋಳ್ಳಿ,ಹಣಮಂತಪ್ಪ ಮಾದರ, ಗುರಪ್ಪ ಕೊಣ್ಣುರ, ಹಣಮಂತ ಮಾದರ, ಸಲಿಂ ಹುಲ್ಲೂರ್ ಅವರು ಉಪಸ್ಥಿತರಿದ್ದರು.