ಭುಗಿಲೆದ್ದ ಕಬ್ಬಿನ ಕಾಳಗ: ಇಂದು ವಿಧಾನಸೌಧ ಮುತ್ತಿಗೆಗೆ ಸಜ್ಜಾದ ಕಬ್ಬು ಬೆಳೆಗಾರರು
ಈ ಹೋರಾಟಕ್ಕೆ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕರೆ ನೀಡಿದೆ.
ಬೆಂಗಳೂರು: ಕಬ್ಬಿಗೆ ನ್ಯಾಯೋಚಿತವಾದ ಬೆಲೆ ನಿಗದಿ ಮಾಡಬೇಕು, ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿದ ಕಬ್ಬಿನ ಹಣ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತಾರಕಕ್ಕೇರಿದ್ದು, ಇಂದು ರೈತರು ಬೆಂಗಳೂರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಈ ಹೋರಾಟಕ್ಕೆ ಕರೆ ನೀಡಿದ್ದು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ರೈತರು ಆಗಮಿಸಲಿದ್ದಾರೆ. 25,000ಕ್ಕೂ ಅಧಿಕ ರೈತರು ಹೋರಾಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ರೈತರು ಇಂದು ಬೆಳಗ್ಗೆ 9 ಗಂಟೆಗೆ ರೈಲ್ವೆ ನಿಲ್ದಾಣದಿಂದ ವಿಧಾನಸೌಧದತ್ತ ಹೊರಡುವ ಸಾಧ್ಯತೆ ಇದೆ.
ಪ್ರಸಕ್ತ ಸಾಲಿಗೆ ಕೇಂದ್ರ ಸರಕಾರ ಕಬ್ಬಿಗೆ 2,613ರೂ. ಎಫ್‌ಆರ್‌ಪಿ ದರ ನಿಗದಿಪಡಿಸಿದೆ. ಆದರೆ, ರಾಜ್ಯ ಸರಕಾರದ ಪ್ರೋತ್ಸಾಹಧನ ನಿಗದಿಪಡಿಸಿ, ಅಂತಿಮ ದರ ಗೊತ್ತುಪಡಿಸಿಲ್ಲ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆಗಳಲ್ಲಿ ಈ ಸಾಲಿನಲ್ಲಿ ಅರೆಯುತ್ತಿರುವ ಕಬ್ಬಿನ ಹಣವನ್ನೇ ರೈತರಿಗೆ ಸರಿಯಾಗಿ ಪಾವತಿ ಮಾಡಿಲ್ಲ, ನವೆಂಬರ್ 5ವರೆಗೆ ಸರ್ಕಾರಿ ಸ್ವಾಮ್ಯದ ಮೈಷುಗರ್ ಕಾರ್ಖಾನೆಯು 7.64 ಕೋಟಿ ರೂ., ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿಯ ಐಸಿಎಲ್ ಶುಗರ್ಸ್ 17.60 ಕೋಟಿ ರೂ., ಭಾರತಿನಗರ ಚಾಮುಂಡೇಶ್ವರಿ ಶುಗರ್ಸ್ 33.81 ಕೋಟಿ ರೂ., ಕೊಪ್ಪದ ಎನ್‌ಎಸ್‌ಎಲ್ ಶುಗರ್ಸ್ 97.06 ಕೋಟಿ ರೂ. ಪಾವತಿಸಬೇಕಿದೆ.