ನಾಳೆ ರೈತ ಸಂಘಟನೆಗಳಿಂದ ರಾಷ್ಟ್ರೀಯ ಹೆದ್ದಾರಿ ತಡೆ
ಒಟ್ಟು 8 ಹೆದ್ದಾರಿಗಳಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ.
ಬೆಂಗಳೂರು: ಭೂ ಸ್ವಾಧೀನ ಕಾಯ್ದೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳು ಸೋಮವಾರ(ಜೂನ್10) ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿವೆ. ಈ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ.
ರಾಜ್ಯದ ಬೊಮ್ಮಸಂದ್ರ ಹೆದ್ದಾರಿ, ದೇವನಹಳ್ಳಿ ಟೋಲ್ ಪ್ರವೇಶ ದ್ವಾರ, ಚಿಕ್ಕಬಳ್ಳಾಪುರ ಟೋಲ್ ಪ್ರವೇಶ ದ್ವಾರ, ತುಮಕೂರು, ಕೋಲಾರ, ಚಿತ್ರದುರ್ಗ, ಆನೇಕಲ್ ಮತ್ತು ಹಾವೇರಿ ಸೇರಿ ಒಟ್ಟು 8 ಹೆದ್ದಾರಿಗಳಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ.
2014ರಲ್ಲಿ ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಕೇಂದ್ರದ ಯುಪಿಎ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಇದರಲ್ಲಿ ರೈತರ ಒಪ್ಪಿಗೆ ಇಲ್ಲದೆ ಭೂ ಸ್ವಾಧೀನ ಮಾಡಿಕೊಳ್ಳುವಂತಿಲ್ಲ. ರೈತರಿಗೆ ಕೊಡುವ ಪರಿಹಾರ ಮಾರುಕಟ್ಟೆ ದರದ ನಾಲ್ಕು ಪಟ್ಟು ಇರಬೇಕು. ಭೂಸ್ವಾಧೀನ ಸಂಪೂರ್ಣವಾಗಿ ಸಾರ್ವಜನಿಕ ಉದ್ದೇಶಕ್ಕೆ ಸೀಮಿತವಾಗಿರಬೇಕು ಎಂದು ತಿಳಿಸಿತ್ತು. ಆದರೆ ರಾಜ್ಯದ ಸಮ್ಮಿಶ್ರ ಸರ್ಕಾರ ಈ ನಿಯಮವನ್ನು ಗಾಳಿಗೆ ತೂರಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಇದಕ್ಕೆ ರಾಜ್ಯದ ರೈತರು ವಿರೋಧ ವ್ಯಕ್ತಪಡಿಸಿದ್ದು, ಸೋಮವಾರ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಲಿದ್ದಾರೆ.