ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹೊಯ್ಸಳ ಪೊಲೀಸ್ ಮೇಲೆ ದಾಳಿ
ಸುಲಿಗೆ ಮಾಡಿ ಎಸ್ಕೇಪ್ ಆಗುತ್ತಿದ್ದ ದುಷ್ಕರ್ಮಿಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ.
ಬೆಂಗಳೂರು: ಸುಲಿಗೆ ಮಾಡಿ ಎಸ್ಕೇಪ್ ಆಗುತ್ತಿದ್ದ ದುಷ್ಕರ್ಮಿಗಳಿಂದ ಹೊಯ್ಸಳ ಪೋಲೀಸರ ಮೇಲೆ ದಾಳಿ ನಡೆದಿದೆ.
ಮುಸುಕು ಹಾಕಿಕೊಂಡು ಬಂದಿದ್ದ ಸುಲಿಗೆಕೋರರು ಬಿಇಎಲ್ ಸರ್ಕಲ್ನಲ್ಲಿ ಪಾರ್ಕ್ ಮಾಡಿದ್ದ ಕ್ಯಾಬ್ ಚಾಲಕರಿಗೆ ಬೆದರಿಕೆಯೊಡ್ಡಿ ಲಾಂಗ್ ಮಚ್ಚುಗಳನ್ನು ತೋರಿಸಿ ಸುಲಿಗೆ ಮಾಡಿದ್ದರು. ಕ್ಯಾಬ್ ಚಾಲಕರ ಬಳಿಯಿದ್ದ ಹಣ, ಪರ್ಸ್, ಮೊಬೈಲ್ ಕಸಿದಿದ್ದ ದುಷ್ಕರ್ಮಿಗಳು. ನಂತರ ಬಿಇಎಲ್ ಸರ್ಕಲ್ ನಿಂದ ಗಂಗಮ್ಮನಗುಡಿ ಸರ್ಕಲ್ ಕಡೆಗೆ ಹೋಗುತ್ತಿದ್ದರು.
ರಾತ್ರಿ ವೇಳೆ ಕ್ಯಾಬ್ ಗಳಲ್ಲಿ ಸುಲಿಗೆ ಮಾಡಿ ಎಸ್ಕೇಪ್ ಅಗುತ್ತಿದ್ದ ದುಷ್ಕರ್ಮಿಗಳ ಬಗ್ಗೆ ಕ್ಯಾಬ್ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿಯ ಆಧಾರದ ಮೇಲೆ ಸುಲಿಗೆಕೋರರನ್ನ ಬೆನ್ನತ್ತಿ ಹೋದ ಹೊಯ್ಸಳ ಸಿಬ್ಬಂದಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ದುಷ್ಕರ್ಮಿಗಳು ತಮ್ಮ ಬಳಿಯಿದ್ದ ಲಾಂಗ್ ನಿಂದ ಹಲ್ಲೆಗೆ ಯತ್ನಿಸಿದ್ದಾರೆ.
ಹಲ್ಲೆ ವೇಳೆ ಹೋಂಗಾರ್ಡ್ ಹನುಮಂತರಾಜು ಎಂಬಾತನಿಗೆ ಗಾಯವಾಗಿದ್ದು, ಹೊಯ್ಸಳ ಸಿಬ್ಬಂದಿ ಕೂದಲೆಳೆಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಹನುಮಂತರಾಜುವಿಗೆ ಲಾಂಗ್ ನಿಂದ ಹಲ್ಲೆ ನಡೆಸಿದ ನಾಲ್ವರು ಸುಲಿಗೆಕೋರರು ಎರಡು ಡಿಯೋ ಬೈಕ್ ನಲ್ಲಿ ಬಂದಿದ್ದರು ಎಂದು ಮಾಹಿತಿ ತಿಳಿದು ಬಂದಿದೆ. ಇದೀಗ ಜಾಲಹಳ್ಳಿ ಪೊಲೀಸರು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.