ಬೆಂಗಳೂರಿನ ಕೈಲಾಶ್ ಬಾರ್ನಲ್ಲಿ ಅಗ್ನಿ ಅವಘಡ, ಐವರು ಸಜೀವ ದಹನ
ಶಾರ್ಟ್ ಸಕ್ಯೂಟ್ನಿಂದ ಮುಂಜಾನೆ 02:30ರ ಸುಮಾರಿಗೆ ಸಂಭವಿಸಿದ ಅವಘಡ.
ಬೆಂಗಳೂರು: ನಗರದ ಕೆ.ಆರ್. ಮಾರ್ಕೆಟ್ ನಲ್ಲಿರುವ ಕೈಲಾಶ್ ಬಾರ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಐವರು ಸಜೀವವಾಗಿ ದಹನವಾಗಿದ್ದಾರೆ.
ಶಾರ್ಟ್ ಸಕ್ಯೂಟ್ನಿಂದ ಮುಂಜಾನೆ 02:30ರ ಸುಮಾರಿಗೆ ಸಂಭವಿಸಿದ ಈ ಅವಘಡ ಸಂಭವಿಸಿದ್ದು, ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನದಿಂದ ಬಂದ 25ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದರು.
ಬಾರ್ ನಲ್ಲಿ ಕೆಲಸಮಾಡಿ ಮಲಗಿದ್ದ ಮಂಜುನಾಥ್(45), ಕೀರ್ತಿ(24), ಮಹೇಶ್, ಸ್ವಾಮಿ(23) ಹಾಗೂ ಪ್ರಸಾದ್(20) ಎಂಬುವವರ ದೇಹ ಭಾಗಶಃ ಸುಟ್ಟು ಕರಕಲಾಗಿದ್ದು, ಸಜೀವ ದಹನವಾಗಿದ್ದಾರೆ. ಐವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಬಳಿಕ ಸ್ಥಳಕ್ಕೆ ಬಂದು ಮಾಹಿತಿ ಪಡೆದ ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್, ಈ ದುರಂತ ಸಂಭವಿಸಿದ ಬಳಿಕ ಪೋಲೀಸರ ಕರೆ ಸ್ವೀಕರಿಸಿ ಪೋಲೀಸ್ ಠಾಣೆಗೆ ಬರುವುದಾಗಿ ಹೇಳಿದ್ದ ಬಾರ್ ಮಾಲೀಕ ದಯಾಶಂಕರ್ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಇದೀಗ ಬಾರ್ ಕ್ಯಾಷಿಯರ್ ಸೇರಿದಂತೆ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ ಇತರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.