ಬೆಂಗಳೂರು : ಬಿಜೆಪಿಯವರು ನೂರು ಜನ್ಮ ಎತ್ತಿಬಂದರೂ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ಇದೇ ಕಾಂಗ್ರೆಸ್ ಪಕ್ಷದ ಶಕ್ತಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.


COMMERCIAL BREAK
SCROLL TO CONTINUE READING

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಕಾಂಗ್ರೆಸ್ ಜನಸಂಪರ್ಕ ಕೇಂದ್ರ ಉದ್ಘಾಟನೆ ಮಾಡಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿರಾ ಗಾಂಧಿ ಅವರು ವೃದ್ಧಾಪ್ಯ, ವಿಧವಾ ವೇತನ, ಬ್ಯಾಂಕ್ ರಾಷ್ಟ್ರೀಕರಣ, ಉಳುವವನಿಗೆ ಭೂಮಿ ಯೋಜನೆ ಜಾರಿಗೆ ತಂದರು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರೈತರ ಪಂಪ್ ಸೆಟ್ ಗೆ 10 ಹೆಚ್.ಪಿ ಉಚಿತ ವಿದ್ಯುತ್, ಕೃಷ್ಣ ಅವರ ಕಾಲದಲ್ಲಿ ಸ್ತ್ರೀಶಕ್ತಿ ಸಂಘ ಯೋಜನೆ ಜಾರಿಗೆ ಬಂದಿತು. ಇದರಲ್ಲಿ ಯಾವುದಾದರೂ ಒಂದು ಯೋಜನೆಯನ್ನು ನಿಲ್ಲಿಸಲಾಗಿದೆಯೇ? ಬಡವರಿಗೆ ನಿವೇಶನ, ಮನೆ ನೀಡುವ ಯೋಜನೆ ನಿಂತಿದೆಯೇ? ಇಲ್ಲ. ಅದೇ ರೀತಿ ಬಿಜೆಪಿಯವರು ನೂರು ಜನ್ಮ ತಳೆದರೂ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ ಎಂದು ವಾಗ್ದಾಳಿ ನಡೆಸಿದರು.


ಇದನ್ನೂ ಓದಿ:ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ: ಸಚಿವ ಪರಮೇಶ್ವರ್ ಸ್ಪಷ್ಟನೆ


ಪದ್ಮನಾಭನಗರದಲ್ಲಿ ನಮ್ಮ ಕಾರ್ಯಕರ್ತರ ಹುಮ್ಮಸ್ಸು, ಶಕ್ತಿ ಸ್ಫೂರ್ತಿ ನೋಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ನಮ್ಮ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ ಮಾಡಿದ್ದೇವೆ. ನಮ್ಮ ಈ ಐದು ಗ್ಯಾರಂಟಿ ಯೋಜನೆಗಳ ಜಾರಿ ಬಂದಿದ್ದು ಯಾಕೆ? ಇವುಗಳ ಅವಶ್ಯಕತೆ ಏನು ಎಂಬುದು ಪ್ರಮುಖವಾದ ವಿಚಾರವಾಗಬೇಕು. ಅಧಿಕಾರ ಬರುತ್ತದೆ, ಹೋಗುತ್ತದೆ. ರಾಜಕಾರಣ ಎಂದ ಮೇಲೆ ಗೆಲುವು, ಸೋಲು ಇರುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಸದಾ ಜನರ ಬದುಕಿನ ಬಗ್ಗೆ ಆಲೋಚಿಸುತ್ತದೆ. ಜನರ ಬದುಕು ಕಟ್ಟುವ ಕೆಲಸ ಮಾಡುತ್ತದೆ. ಬಿಜೆಪಿಯವರು ದೇವರು, ಧರ್ಮ, ಜಾತಿ ಆಧಾರವಾಗಿ, ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ ಎಂದು ತಿಳಿಸಿದರು.


ನಾವು ದೇವರ ಬಳಿ ಹೋಗಿ, ವಿದ್ಯೆ, ಆರೋಗ್ಯ, ನೆಮ್ಮದಿ, ಆರ್ಥಿಕ ಸುಧಾರಣೆ ಬಯಸಿ ಪ್ರಾರ್ಥಿಸುತ್ತೇವೆ. ಇದರಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಾರೆ. ಆದರೆ ನಾವು ನೀವು ದೇವರಲ್ಲಿ ಯಾವುದು ಬೇಕು ಎಂದು ಪ್ರಾರ್ಥನೆ ಮಾಡುತ್ತೀರೋ ಅದನ್ನು ನೀಡಲು ಕಾರ್ಯಕ್ರಮ ರೂಪಿಸುತ್ತೇವೆ. ನಿಮ್ಮ ಮನೆಯ ಜ್ಯೋತಿ ಬೆಳಗಲಿ ಎಂದು 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ಸುಮಾರು 1.50 ಕೋಟಿ ಮನೆಗಳು ವಿದ್ಯುತ್ ಬಿಲ್ ಕಟ್ಟುತ್ತಿಲ್ಲ. ಬಡ ಕುಟುಂಬದ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ ನೀಡಲು ಮುಂದಾದಾಗ, ಅತ್ತೆ ಸೊಸೆ ಮಧ್ಯೆ ಜಗಳ ತಂದಿಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಅಪಪ್ರಚಾರ ಮಾಡಿದವು. ಯಾರ ಮನೆಯಲ್ಲಾದರೂ ಅತ್ತೆ ಸೊಸೆ ಈ ವಿಚಾರಕ್ಕೆ ಜಗಳ ಆಡಿದ್ದಾರಾ? ಈ ಯೋಜನೆ ಹಣ ಒಂದು ತಿಂಗಳು ಹೆಚ್ಚು ಕಮ್ಮಿಯಾಗಿ ಬಂದಿರಬಹುದು. ಆದರೆ ಕಳೆದ ಒಂದು ವರ್ಷದಲ್ಲಿ ಬಹುತೇಕ ಹಣ ಬಂದಿದೆ. ಇನ್ನು ಅನ್ನಭಾಗ್ಯ ಯೋಜನೆಯಲ್ಲಿ 5 ಕೆ.ಜಿ ಅಕ್ಕಿ, 5 ಕೆ.ಜಿ ಅಕ್ಕಿ ಹಣ ನೀಡುತ್ತಿದ್ದೇವೆ ಎಂದರು. 


ಇದನ್ನೂ ಓದಿ: ತಜ್ಞರ ಪ್ರಕಾರ 50 ವರ್ಷಕ್ಕೊಮ್ಮೆ ಗೇಟ್ ಬದಲಿಸಬೇಕು: ಸಿಎಂ ಸಿದ್ದರಾಮಯ್ಯ


ಇನ್ನು ದುಡಿಯುವ ಮಹಿಳೆಯರು ಕೆಲಸಕ್ಕೆ ಹೋಗುವಾಗ ಬಸ್ ಪ್ರಯಾಣ ದರದ ಹೊರೆಯನ್ನು ಇಳಿಸಲು ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರು ದೇವಾಲಯ, ಸಂಬಂಧಿಕರ ಮನೆಗೆ ಹೋಗಲು ಅನುಕೂಲವಾಗಿದೆ. ಇನ್ನು ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಇಂತಹ ಐದು ಗ್ಯಾರಂಟಿ ಯೋಜನೆಗಳ ಪೈಕಿ ಯಾವುದಾದರೂ ಒಂದು ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ನೀಡಿದ್ದಾರಾ? ಯಡಿಯೂರಪ್ಪ, ಸದಾನಂದ ಗೌಡರು, ಜಗದೀಶ್ ಶೆಟ್ಟರ್, ಬೊಮ್ಮಾಯಿ, ಆರ್.ಅಶೋಕ್ ಅವರು ಕೊಟ್ಟಿದ್ದಾರಾ? ಜೆಡಿಎಸ್ ಅವಧಿಯಲ್ಲಿ ನೀಡಿದ್ದಾರೆಯೇ? ಎಂದು ಪ್ರಶ್ನಿಸಿದರು.


ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ಬಿಜೆಪಿಯವರೂ ಈ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಹಾಗಿದ್ದರೆ ಅಶೋಕ್ ಅವರು ತಮ್ಮ ಕಾರ್ಯಕರ್ತರಿಗೆ ಹೇಳಿ ಈ ಗ್ಯಾರಂಟಿ ಯೋಜನೆ ಪ್ರಯೋಜನ ಪಡೆಯದಂತೆ ಸಲಹೆ ನೀಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಸಂವಿಧಾನವೇ ನೀಡಿದೆ. ವಿರೋಧ ಪಕ್ಷದ ನಾಯಕರ ಕ್ಷೇತ್ರದಿಂದಲೇ ಈ ಗ್ಯಾರಂಟಿ ಯೋಜನೆಗಳ ಸಮಿತಿಯನ್ನು ಕಚೇರಿ ಉದ್ಘಾಟನೆ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.


ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ ಎಸ್‌ ಎಲ್‌ ರಿಪೋರ್ಟ್


ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಹೀಗಾಗಿ ಪ್ರಮೋದ್ ಹಾಗೂ ಅವರ ತಂಡದವರಿಗೆ ಒಂದು ಮಾತು ಹೇಳುತ್ತಿದ್ದೇನೆ. ನೀವು ಕ್ಷೇತ್ರದಲ್ಲಿ ಮನೆ ಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆಯೇ, ಇಲ್ಲವೇ? ಎಂದು ಪರಿಶೀಲನೆ ಮಾಡಬೇಕು. ಜನರ ವಿಶ್ವಾಸ ಗಳಿಸಬೇಕು ಎಂದು ಕಿವಿ ಮಾತು ಹೇಳಿದರು.


ಮನುಷ್ಯನಿಗೆ ನಂಬಿಕೆ ಮುಖ್ಯ. ನಮ್ಮ ಕೆಲಸ ಬಡವರಿಗೆ ಅನುಕೂಲವಾಗುತ್ತದೆ ಎಂದು ನಾವು ನಂಬಿದ್ದೇವೆ. ಲೋಕಸಭೆ ಚುನಾವಣೆಯೇ ಬೇರೆ, ವಿಧಾನಸಭಾ ಕ್ಷೇತ್ರ ಚುನಾವಣೆಯೇ ಬೇರೆ. ಪಾಲಿಕೆ ಚುನಾವಣೆಯೂ ಮುಂದಿನ ದಿನಗಳಲ್ಲಿ ನಡೆಯಲಿದೆ. ಮುಂದೆ ನಿಮ್ಮೆಲ್ಲರ ಆಶೀರ್ವಾದ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಇರಲಿ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನೀವು ದಿನ ಬೆಳಗಾದರೆ ಕೈನಲ್ಲಿ ದೇವರನ್ನು ಕಾಣುತ್ತಾ ಪ್ರಾರ್ಥನೆ ಮಾಡುತ್ತೀರಿ. ದುಡಿಮೆಯ ಶಕ್ತಿ ಈ ಕೈ. ಇಂದಿರಾ ಗಾಂಧಿ ಅವರು ಕೊಟ್ಟ ಈ ಕೈಯನ್ನು ಸುಭದ್ರವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ತಿಳಿಸಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.