ಮೈಸೂರು: ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾದ ಘಟನೆ ಗುಂಡ್ಲುಪೇಟೆ ಬಳಿಯ ಖಾಸಗಿ ಶಾಲೆಯ ಜಮೀನೊಂದರಲ್ಲಿ ಇಂದು ಮುಂಜಾನೆ ನಡೆದಿದೆ. ಮೂಲತಃ ತುಮಕೂರಿನವರಾದ ಮೃತರು, ಸದ್ಯ ಮೈಸೂರಿನಲ್ಲಿ ನೆಲೆಸಿದ್ದರು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಸಾಲದಬಾಧೆ ತಾಳಲಾರದೆ ಕುಟುಂಬದವರೆಲ್ಲಾ ಒಟ್ಟಾಗಿ ಆತ್ಮಹತ್ಯೆಗೆ ಶರಣಾಗುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುಟ್ಟಿದೆ. ಮೃತರನ್ನು ನಾಗರಾಜ ಭಟ್ಟಾಚಾರ್ಯ (70), ಅವರ ಪತ್ನಿ ಹೇಮಲತಾ(60), ಪುತ್ರ ಓಂಕಾರ ಪ್ರಸಾದ್(38) ಅವರ ಪತ್ನಿ ನಿಖಿತಾ (28) ಮತ್ತು ಪುತ್ರ ಆರ್ಯನ್(5) ಎಂದು ಗುರುತಿಸಲಾಗಿದೆ. ಓಂಕಾರ ಪ್ರಸಾದ್ ಅವರ ಪತ್ನಿ ನಿಖಿತಾ ಗರ್ಭಿನಿಯಾಗಿದ್ದರು ಎಂದು ಹೇಳಲಾಗಿದೆ. 


ನಾಗರಾಜ ಭಟ್ಟಾಚಾರ್ಯ ಮತ್ತು ಓಂಕಾರ ಪ್ರಸಾದ್ ಮೈಸೂರಿನಲ್ಲಿ ಡಾಟಾಬೇಸ್ ಕಂಪನಿ ನಡೆಸುತ್ತಿದ್ದು, ಜೊತೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ವ್ಯವಹಾರದಲ್ಲಿ ನಷ್ಟವಾಗಿದ್ದರಿಂದ ಕಳೆದೆರಡು ವರ್ಷಗಳಿಂದ ತೀವ್ರ ಆರ್ಥಿಕ ತೊಂದರೆ ಎದುರಿಸುತ್ತಿದ್ದರು ಎಂದು ವರದಿಯಾಗಿದೆ.


ಮೈಸೂರಿನಿಂದ ಗುಂಡ್ಲುಪೇಟೆಗೆ ಬಂದು ಲಾಡ್ಜ್ ಒಂದರಲ್ಲಿ ರೂಂ ಮಾಡಿಕೊಂಡಿದ್ದ ಈ ಕುಟುಂಬದವರು ಇಂದು ಮುಂಜಾನೆ ಸುಮಾರು 3:30 ರಿಂದ 4 ಗಂಟೆ ವೇಳೆಗೆ ಜಮೀನಿನ ಬಳಿ ತೆರಳಿದ್ದಾರೆ. ಓಂಕಾರ ಪ್ರಸಾದ್, ತಂದೆ-ತಾಯಿ, ಪತ್ನಿ, ಮಗ ನಾಲ್ವರಿಗೂ ಹಣೆಗೆ ಗುಂಡಿಟ್ಟು ಕೊನೆಗೆ ಬಾಯಿಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ ಎಂದು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ಮಾಹಿತಿ ನೀಡಿದ್ದಾರೆ.