ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿ ಪರಿಸ್ಥಿತಿ‌ ಹಿನ್ನೆಲೆಯಲ್ಲಿ ಶಾಸಕನಾಗಿ ನನ್ನ ಒಂದು ತಿಂಗಳ ಸಂಬಂಳ ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ 10 ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.


COMMERCIAL BREAK
SCROLL TO CONTINUE READING

ಸದಾಶಿವನಗರದ ಬಿಡಿಎ ಕ್ವಾಟ್ರಸ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ‌ ನೆರೆ ಪರಿಸ್ಥಿತಿ ವಿಪರೀತವಾಗಿದ್ದು, ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿ ನಿಭಾಯಿಸಲು ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರಕಾರವೇ ಇಲ್ಲ. ಪ್ರಧಾನಿ ಅಥವಾ ಕೇಂದ್ರ ಗೃಹ ಸಚಿವರು ಕೂಡಲೇ ರಾಜ್ಯದಲ್ಲಿ‌ ನೆರೆ ಪರಿಸ್ಥಿತಿಯನ್ನೂ ವೈಮಾನಿಕ ಸಮೀಕ್ಷೆ ನಡೆಸಿ, 10 ಸಾವಿರ ಕೋಟಿ ರೂ. ಮೊತ್ತದ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು. ಜೊತೆಗೆ ಕೇಂದ್ರದಿಂದ ತಂಡ ಆಗಮಿಸಿ ಸೂಕ್ತ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.


ರಾಜ್ಯಪಾಲರು ಕಣ್ಣು ಮುಚ್ಚಿ ಕುಳಿತಿದ್ದಾರಾ?
ಬಿಜೆಪಿಯವರಿಗೆ ಕಾಂಗ್ರೆಸ್, ಜೆಡಿಎಸ್‌ ಶಾಸಕರಿಂದ ರಾಜೀನಾಮೆ ಕೊಡಿಸಲು ಇದ್ದ ಆಸಕ್ತಿ, ಸರಕಾರ ಬೀಳಿಸಲು ಇದ್ದ ಆಸಕ್ತಿ, ಸಂಪುಟ ವಿಸ್ತರಣೆಗೆ ಏಕಿಲ್ಲ ಎಂದು ಪರಮೇಶ್ವರ ಪ್ರಶ್ನಿಸಿದರು.‌ ರಾಜ್ಯಪಾಲರು ಕಣ್ಣು ಮುಚ್ಚಿ ಕುಳಿತಿದ್ದಾರಾ? ಎಂದು ಪ್ರಶ್ನಿಸಿದರು. ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಸಂಪುಟ ವಿಸ್ತರಣೆಗೆ ಕಾಯುತ್ತಿದ್ದರೆ ಅವರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದೀರಾ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಲಿ ಎಂದು ಅವರು ಆಗ್ರಹಿಸಿದರು.


ಸರಕಾರ ಇಲ್ಲ ಎಂದರೆ ಅಧಿಕಾರಿಗಳು ಆರಾಮಾಗಿ ಕುಳಿತಿದ್ದಾರೆ. ಯಾವ ನೋಡೆಲ್ ಅಧಿಕಾರಿಗಳು ಕ್ಯಾಂಪ್‌ ಮಾಡಿಲ್ಲ. ತಕ್ಷಣ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಯಾಕೆ ಮಾಡಿಲ್ಲ ಎಂಬ ಕಾರಣ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.. 


ನನ್ನ ಒಂದು ತಿಂಗಳ ಶಾಸಕರ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತೇನೆ. ಕಾಂಗ್ರೆಸ್‌ನ ಎಲ್ಲಾ ಶಾಸಕರು ನೆರೆ ಸಂತ್ರಸ್ತರಿಗೆ ನೀಡಬೇಕು ಎಂದು ಈ ಮೂಲಖ ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ನಾಯಕರಲ್ಲಿ ವಿನಂತಿಸುವೆ. ಸಿದ್ದಾರ್ಥ ಸಂಸ್ಥೆಯಿಂದ 10 ಲಕ್ಷ ನೀಡಲು ಸಿಎಂ ಪರಿಹಾರ ನಿಧಿಗೆ ನೀಡಲಾಗುತ್ತೆ. ನಮ್ಮ‌ಮೆಡಿಕಲ್ ಕಾಲೇಜಿನಿಂದ ಚಿಕಿತ್ಸೆಗೆ ತಂಡ ಕಳುಹಿಸಲು‌ ನಾವು ತಯಾರಿದ್ದೇವೆ ಎಂದು ಅವರು ತಿಳಿಸಿದರು.  


ನಮ್ಮ‌ ಸರಕಾರ ಯಾವುದನ್ನೂ ಕಾನೂನು ಬಾಹಿರವಾಗಿ ಮಾಡಿಲ್ಲ:
ಈ ಸರಕಾರ ಹೇಗೆ ಕೆಲಸ ಮಾಡುತ್ತೆ ಎಂದು ಗಮನಿಸುತ್ತೇವೆ. ಕಾನೂನು ಬಾಹಿರವಾಗಿ ಏನೇ ತೀರ್ಮಾನ ಆದರೂ ಅದನ್ನು ಜನರ ಗಮನಕ್ಕೆ ತರುತ್ತೇವೆ. ನಮ್ಮ‌ ಸರಕಾರ ಯಾವುದನ್ನೂ ಕಾನೂನು ಬಾಹಿರವಾಗಿ ಮಾಡಿಲ್ಲ. ಬಿಬಿಎಂಪಿಯ ಕೌನ್ಸಿಲ್‌ನಲ್ಲೂ ಬಿಜೆಪಿ ಸದಸ್ಯರು ಇದ್ದಾರೆ. ಅವರು ಒಪ್ಪಿ‌ಕಳುಹಿಸಿದ ಬಜೆಟ್‌ನನ್ನೇ ನಾವು ಒಪ್ಪಿದ್ದೇವೆ.‌ ಆದರೆ ಯಾಕೆ ಅದನ್ನು ತಡೆದಿದ್ದಾರೆ ಗೊತ್ತಿಲ್ಲ. 13,500 ಸಾವಿರ ಕೋಟಿ ಇದ್ದ ಬಜೆಟ್‌ನನ್ನು ಕಡಿಮೆ ಮಾಡಿದ್ದೇವೆ. ಯಾಕೆ ತಡೆ ಹಿಡಿದ್ದಾರೆಂದು ಗೊತ್ತಿಲ್ಲ ಎಂದರು.