14 ತಿಂಗಳು ನಾನು ಕಾಂಗ್ರೆಸ್‌ನ ಗುಲಾಮನಂತೆ ದುಡಿದಿದ್ದೇನೆ: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ
ಹಲವಾರು ಕಾಂಗ್ರೆಸ್ ನಾಯಕರು ಸಮ್ಮಿಶ್ರ ಸರ್ಕಾರ ರಚಿಸಲು ಬಯಸಿರಲಿಲ್ಲ ಎಂದು ಜೆಡಿ (ಎಸ್) ನಾಯಕ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಾನು ಕಾಂಗ್ರೆಸ್‌ನ ಗುಲಾಮನಂತೆ ದುಡಿದಿದ್ದೇನೆ ಎಂದು ಜೆಡಿ (ಎಸ್) ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸೋಮವಾರ ಸುದ್ದಿಸಂಸ್ಥೆ ಎಎನ್ಐ ಜೊತೆಗಿನ ವಿಶೇಷ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಹೆಚ್.ಡಿ. ಕುಮಾರಸ್ವಾಮಿ, "ನನ್ನ ನೇತೃತ್ವದ ಸರ್ಕಾರದಲ್ಲಿ ನಾನು ಎಲ್ಲಾ ಶಾಸಕರಿಗೆ ಮತ್ತು ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆ. ಆದರೂ ಅವರು ನನ್ನನ್ನು ಏಕೆ ದೂಷಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಕಳೆದ 14 ತಿಂಗಳುಗಳಿಂದ, ನಾನು ಈ ಶಾಸಕರಿಗೆ ಮತ್ತು ನಮ್ಮ ಸಮ್ಮಿಶ್ರ ಪಾಲುದಾರ (ಕಾಂಗ್ರೆಸ್) ಗೆ ಗುಲಾಮರಂತೆ ಕೆಲಸ ಮಾಡಿದ್ದೇನೆ. ಆದರೂ ಅವರು ಏಕೆ ನನ್ನನ್ನು ದೂಷಿಸುತ್ತಿದ್ದಾರೆ? ನನಗೆ ಗೊತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
14 ತಿಂಗಳ ಕಾಂಗ್ರೆಸ್-ಜೆಡಿ (ಎಸ್) ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸಲಾಗದೆ ಪತನವಾಯಿತು. ಕಾಂಗ್ರೆಸ್-ಜೆಡಿ (ಎಸ್) ಸರ್ಕಾರದ ಪತನದ ನಂತರ ಜುಲೈ 26 ರಂದು ಕರ್ನಾಟಕದ 25 ನೇ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದರು.
ಹಲವು ಕಾಂಗ್ರೆಸ್ ನಾಯಕರಿಗೆ ಮೈತ್ರಿ ಸರ್ಕಾರ ರಚಿಸುವ ಒಲವಿರಲಿಲ್ಲ:
ಹಲವಾರು ಕಾಂಗ್ರೆಸ್ ನಾಯಕರಿಗೆ ಸಮ್ಮಿಶ್ರ ಸರ್ಕಾರ ರಚಿಸಲು ಒಲವಿರಲಿಲ್ಲ ಎಂದು ಜೆಡಿ (ಎಸ್) ನಾಯಕ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. "ನಮ್ಮ ರಾಜ್ಯದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಕಾರಣ, ಕಾಂಗ್ರೆಸ್ ಹೈಕಮಾಂಡ್ ಜೆಡಿ(ಎಸ್) ಜೊತೆ ಕೈಜೋಡಿಸಲು ಸೂಚಿಸಿ, ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ರಚಿಸಲು ಬಯಸಿದ್ದರು. ಆದರೆ, ನನ್ನ ಮೂಲಗಳ ಪ್ರಕಾರ ಕೆಲವು ಸ್ಥಳೀಯ ನಾಯಕರಿಗೆ ಈ ಮೈತ್ರಿ ಸರ್ಕಾರ ರಚನೆ ಇಷ್ಟವಿರಲಿಲ್ಲ" ಎಂದು ಕುಮಾರಸ್ವಾಮಿ ಹೇಳಿದರು.
"ಸರ್ಕಾರ ಅಧಿಕಾರಕ್ಕೆ ಬಂದ ಮೊದಲನೇ ದಿನದಿಂದಲೂ ಕಾಂಗ್ರೆಸ್ ನಾಯಕರ ಒಂದು ಭಾಗವು ಸಾರ್ವಜನಿಕರ ಬಳಿ ವರ್ತಿಸಿದ ಮತ್ತು ಪ್ರತಿಕ್ರಿಯಿಸಿದ ರೀತಿ ಎಲ್ಲರಿಗೂ ತಿಳಿದಿದೆ". ನಿಜ ಹೇಳಬೇಕೆಂದರೆ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ಕೆಲಸಗಳಿಗೆ ಜೆಡಿಎಸ್ ಶಾಸಕರ ಕ್ಷೇತ್ರಗಳಿಗಿಂತ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿತ್ತು ಕುಮಾರಸ್ವಾಮಿ ತಿಳಿಸಿದರು.
"ಶಾಸಕರು ಅಪಾಯಿಂಟ್ಮೆಂಟ್ ತೆಗೆದುಕೊಳ್ಳದೆ ಬಂದಾಗಲೂ ನಾನು ಅವರನ್ನು ಭೇಟಿಯಾದೆ. ಅವರ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರು ಯಾವುದೇಮನವಿ ಮಾಡಿದರೂ, ನಾನು ತಕ್ಷಣ ಅದರ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಂಡೆ. ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಲು ಸಾಧ್ಯವಾಗದ ಕೆಲಸವನ್ನು, ನಾನು 14 ತಿಂಗಳಲ್ಲಿ ಮಾಡಿದ್ದೇನೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 14 ತಿಂಗಳಲ್ಲಿ 19,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ನೊಂದಿಗೆ ಸರ್ಕಾರ ರಚಿಸಲು ಜೆಡಿಎಸ್ ಶಾಸಕರ ವಿರೋಧವೂ ಇತ್ತು:
ಜೆಡಿ (ಎಸ್) -ಕಾಂಗ್ರೆಸ್ ಮೈತ್ರಿ ಸರ್ಕಾರದ ಕುರಿತು ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ನೊಂದಿಗೆ ಸರ್ಕಾರ ರಚಿಸಲು ಜೆಡಿಎಸ್ ಶಾಸಕರ ವಿರೋಧವೂ ಇತ್ತು. ಯಾವುದೇ ಹಣ, ಅಧಿಕಾರವಿಲ್ಲದಿದ್ದರೂ ಕಳೆದ 10 ವರ್ಷಗಳಿಂದ ನನ್ನ ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಅವರೂ ಕೂಡ ಈ ಮೈತ್ರಿ ಸರ್ಕಾರದ ರಚನೆಯಿಂದ ಸಂತೋಷವಾಗಿರಲಿಲ್ಲ. ಕಾಂಗ್ರೆಸ್ ಜೊತೆ ಕೈಜೋಡಿಸಿದ ನಂತರ ನಮ್ಮ ಪಕ್ಷದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಮುಂದೊಂದು ದಿನ ಅವರು ನಿಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ ಎಂದು ಎಚ್ಚರಿಸಿದ್ದರು ಎಂದು ಮೈತ್ರಿ ಸರ್ಕಾರ ರಚನೆಗೆ ಜೆಡಿಎಸ್ ಪಕ್ಷದಲ್ಲೂ ಸಮ್ಮತವಿರಲ್ಲಿಲ್ಲ ಎಂದು ತಿಳಿಸಿದರು.
ನಾನು ಮಾಡಿದ ಕೆಲಸಗಳನ್ನು ಯಾರೂ ಗುರುತಿಸಲಿಲ್ಲ ಎಂಬ ನೋವಿದೆ: ಕುಮಾರಸ್ವಾಮಿ
"ನಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಬಹಳ ಸಂತೋಷದಿಂದ ಇದ್ದೇನೆ. ಬಹುದೊಡ್ಡ ಭಾರವೊಂದು ಇಳಿದಂತಾಗಿದೆ. 14 ತಿಂಗಳು, ನಾನು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ. ನಾನು ಮಾಡಿದ ಒಳ್ಳೆಯ ಕೆಲಸಗಳನ್ನು ಯಾರೊಬ್ಬರೂ ಗುರುತಿಸಲಿಲ್ಲ ಎಂಬ ನೋವು ನನಗಿದೆ" ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜೆಡಿ (ಎಸ್) ಪಕ್ಷದ ಹಲವಾರು ಮುಖಂಡರು ಭವಿಷ್ಯದಲ್ಲಿ ಇನ್ನೆಂದೂ ಕಾಂಗ್ರೆಸ್ ಜೊತೆಗಿನ ಮೈತ್ರಿ ಬೇಡ ಎಂದು ಅಭಿಪ್ರಾಯ ಪಟ್ಟಿದ್ದಾರೆ. "ಬಹುಪಾಲು ಕಾರ್ಯಕರ್ತರು ಈ ಬಗ್ಗೆ ಆಸಕ್ತಿ ಹೊಂದಿಲ್ಲ. ಆದರೆ ಕಾಂಗ್ರೆಸ್ ಹೈಕಮಾಂಡ್ ಈಗಲೂ ನಮ್ಮೊಂದಿಗೆ ತುಂಬಾ ಸಹಕಾರ ನೀಡಿದೆ. ಭವಿಷ್ಯದಲ್ಲಿ ಏನಾಗಲಿದೆ ಎಂದು ನೋಡೋಣ" ಎಂದು ಮುಂದಿನ ರಾಜಕೀಯ ಚಿಂತನೆ ಕುರಿತು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
Source: ಎಎನ್‌ಐ