ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಮತ್ತೊಮ್ಮೆ ಹೃದಯ ಶಸ್ತ್ರ ಚಿಕಿತ್ಸೆ
ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಗೆ ಶನಿವಾರ ಡಾ.ಮಂಜುನಾಥ್ ಅವರಿಂದ ಹೃದಯ ಶಸ್ತ್ರ ಚಿಕಿತ್ಸೆ ನಡೆಯಲಿದೆ.
ಬೆಂಗಳೂರು: ಕುಮಾರಸ್ವಾಮಿ ಅವರಿಗೆ ಮತ್ತೆ ಹಾರ್ಟ್ ಆಪರೇಷನ್ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೆಚ್.ಡಿ.ಕೆ ಗೆ ಇತ್ತೀಚಿಗೆ ಬಹಳ ತೊಂದರೆ ಉಂಟು ಮಾಡುತ್ತಿರುವ ಕೆಮ್ಮು ಮತ್ತು ಆಗಾಗ ಎದೆ ನೋವು ಬರುತ್ತಿರುವುದರಿಂದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಉತ್ತಮ ಎಂದು ವೈದ್ಯರು ತಿಳಿಸಿದ್ದಾರೆ.
2007ರಲ್ಲಿ ಅಂದರೆ ಹತ್ತು ವರ್ಷಗಳ ಹಿಂದೆ ಕೂಡ ಕುಮಾರಸ್ವಾಮಿ ಅವರಿಗೆ ಹೃದಯದಲ್ಲಿ ಹೋಲ್ ಇದ್ದ ಕಾರಣ ಹಾರ್ಟ್ ಆಪರೇಷನ್ ಮಾಡಲಾಗಿತ್ತು. ಈಗ ಮತ್ತೆ ಅದೇ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ನಡೆಯಲಿದೆ.
ಸದ್ಯ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಹೆಚ್ಡಿಕೆ ಗೆ ಶುಕ್ರವಾರ ಸಂಜೆಯೇ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದ್ದು, ಶನಿವಾರ ಡಾ.ಮಂಜುನಾಥ್ ಅವರ ನೇತೃತ್ವದಲ್ಲಿ ಆಪರೇಷನ್ ನಡೆಯಲಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕುಮಾರಸ್ವಾಮಿ, ತಮಗೆ ಆಗಾಗ ಎದೆನೋವು ಕಾಣಿಸಿಕೊಲ್ಲುತ್ತಿರುವುದರಿಂದ ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ 15 ದಿನಗಳ ವಿಶ್ರಾಂತಿಯ ಅಗತ್ಯ ಇದೆ. ನಂತರ ತಾವು ಎಂದಿನಂತೆ ಸಕ್ರಿಯವಾಗಿ ತಮ್ಮ ಕೆಲಸದಲ್ಲಿ ತೊಡಗುವುದಾಗಿ ತಿಳಿಸಿದ್ದಾರೆ. ಜೊತೆಗೆ ಅಭಿಮಾನಿಗಳು ಗಾಬರಿಯಾಗದಂತೆ ಮನವಿ ಮಾಡಿದ್ದಾರೆ.
ಸದ್ಯ ಜೆ ಪಿ ನಗರ ನಿವಾಸದಲ್ಲಿರುವ ಹೆಚ್ಡಿಕೆ, ಪಿತೃ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಂದು ಸಂಜೆ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಕುಟುಂಬ ಸದಸ್ಯರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.