ಡಿಕೆಶಿ ಭೇಟಿಗಾಗಿ ತಿಹಾರ್ ಜೈಲಿಗೆ ಆಗಮಿಸಿದ ಹೆಚ್‌ಡಿಕೆ
ಹೆಚ್.ಡಿ. ಕುಮಾರಸ್ವಾಮಿಗೆ ಡಿ.ಕೆ. ಸುರೇಶ್, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್ ಸಾಥ್
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಭೇಟಿಯಾದರು.
ಇಡಿ ಕಸ್ಟಡಿ ಬಳಿಕ ಇದೇ ಮೊದಲ ಬಾರಿಗೆ ಹೆಚ್.ಡಿ. ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲು ತಿಹಾರ್ ಜೈಲಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಡಿ.ಕೆ. ಸುರೇಶ್, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್ ಸಾಥ್ ಹೆಚ್‌ಡಿಕೆ ಸಾಥ್ ನೀಡಿದರು.
ಒಂದು ದಿನಕ್ಕೆ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುವುದರಿಂದ ಡಿ.ಕೆ. ಸುರೇಶ್ ಹಾಗೂ ಹೆಚ್‌ಡಿಕೆ ಮಾತ್ರ ಡಿಕೆಶಿ ಭೇಟಿಗೆ ಅನುವು ಮಾಡಿಕೊಡಲಾಯಿತು. ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು ಹಾಗೂ ಸಾ.ರಾ. ಮಹೇಶ್ ಅವರಿಗೆ ಜೈಲು ಅಧಿಕಾರಿಗಳು ಪ್ರವೇಶ ನಿರಾಕರಿಸಿದರಿಂದ ಅವರಿಗೆ ಡಿಕೆಶಿ ಭೇಟಿಗೆ ಅವಕಾಶ ದೊರೆಯಲಿಲ್ಲ.
ಅಕ್ಟೋಬರ್ 18ರಂದು ಜಾಮೀನು ಅರ್ಜಿಗೆ ಸಂಬಂಧಿಸಿದ ಪ್ರಕರಣ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ನ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕಸದಸ್ಯ ಪೀಠವು ತೀರ್ಪುನ್ನು ಕಾಯ್ದಿರಿಸಿತ್ತು. ಇಂದು ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದ ತೀರ್ಪುನ್ನು ಪ್ರಕಟಿಸುವ ಸಾಧ್ಯತೆ ಇದೆ.