ಡಿಕೆಶಿ ತಾಯಿ ಭೇಟಿ ಮಾಡಿ ಧೈರ್ಯ ಹೇಳಿದ ಮಾಜಿ ಸಿಎಂ ಹೆಚ್ಡಿಕೆ
ಇಂದು ಮಧ್ಯಾಹ್ನ ಡಿಕೆಶಿ ಮನೆಗೆ ತೆರಳಿ ಅವರ ತಾಯಿಯನ್ನು ಭೇಟಿ ನೀಡಿದ ಕುಮಾರಸ್ವಾಮಿ ಅವರು, ನಿಮ್ಮ ಜೊತೆ ನಾವಿದ್ದೇವೆ, ನಿಮ್ಮ ಮಗ ಯಾವುದೇ ತಪ್ಪು ಮಾಡಿಲ್ಲ, ಕಾನೂನು ಹೋರಾಟದಲ್ಲಿ ಜಯಗಳಿಸಿ ಕಳಂಕರಹಿತರಾಗಿ ಬರುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ಕನಕಪುರ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ತಾಯಿಯನ್ನು ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಭೇಟಿ ಮಾಡಿ ಧೈರ್ಯ ತುಂಬಿದರು.
ಇಂದು ಮಧ್ಯಾಹ್ನ ಡಿಕೆಶಿ ಮನೆಗೆ ಭೇಟಿ ನೀಡಿದ ಕುಮಾರಸ್ವಾಮಿ ಅವರು, ನಿಮ್ಮ ಜೊತೆ ನಾವಿದ್ದೇವೆ, ನಿಮ್ಮ ಮಗ ಯಾವುದೇ ತಪ್ಪು ಮಾಡಿಲ್ಲ, ಕಾನೂನು ಹೋರಾಟದಲ್ಲಿ ಜಯಗಳಿಸಿ ಕಳಂಕರಹಿತರಾಗಿ ಬರುತ್ತಾರೆ. ನೀವು ಯಾವುದೇ ಯೋಚನೆ ಮಾಡಬೇಡಿ. ಆರೋಗ್ಯದ ಕಡೆ ಗಮನಕೊಡಿ ಎಂದು ಸಮಾಧಾನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ದ್ವೇಷದ ರಾಜಕಾರಣ ಮಾಡುವವರಿಗೆ ಈ ತಾಯಿಯ ಶಾಪ ಖಂಡಿತಾ ತಟ್ಟುತ್ತದೆ ಎಂದು ಕಟುವಾಗಿ ನುಡಿದರು.
ಜಾರಿನಿರ್ದೆಶನಾಲಯದ ಅಧಿಕಾರಿಗಳು ಡಿಕೆಶಿ ಅವರನ್ನು ಬಂಧಿಸಿದ ಬೆನ್ನಲ್ಲೇ ಬೆಂಬಲಿಗರು ಮತ್ತು ಕಾರ್ಯಕರ್ತರು ರಾಜ್ಯಾದ್ಯಂತ ನಡೆಸಿದ ಪ್ರತಿಭಟನೆಗೆ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಸಹ ಬೆಂಬಲ ನೀಡಿದ್ದರು. ದ್ವೇಷದ ರಾಜಕಾರಣದ ಮೂಲಕ ನಾಲ್ಕು ದಿನಗಳ ಸುದೀರ್ಘ ವಿಚಾರಣೆಯ ನಂತರವೂ ವಿಚಾರಣೆಗೆ ಸ್ಪಂದಿಸುತ್ತಿಲ್ಲ ಎಂಬ ಕಾರಣ ನೀಡಿ ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.