ಬೆಂಗಳೂರು: ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆಯಿಂದ ಪ್ರವಾಹ (Flood) ಪರಿಸ್ಥಿತಿ ನಿರ್ಮಾಣವಾಗಿದೆ‌. ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರ ತಕ್ಷಣದಿಂದಲೇ ಕಾರ್ಯಪ್ರವತ್ತರಾಗಬೇಕು ಮತ್ತು ಹಣಕಾಸಿನ ನೆರವು ನೀಡುವಂತೆ ಕೇಂದ್ರ ಸರ್ಕಾರಸ ಮೇಲೆ‌ ಒತ್ತಡ ಹೇರಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (H.D. Kumarswamy) ಒತ್ತಾಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, 'ಮುಂಗಾರು ಮಳೆಗೆ ನಲುಗಿರುವ ರಾಜ್ಯದ ಜನತೆ ಮತ್ತು ಜಾನುವಾರುಗಳ ರಕ್ಷಣೆಗೆ ಸರ್ಕಾರ ಸಮರೋಪಾದಿಯಲ್ಲಿ ಸ್ಪಂದಿಸುವ ಪರಿಹಾರ ಕಾಮಗಾರಿಗಳನ್ನು ಅನುಷ್ಠಾನ ಮಾಡುವಂತೆ ಆಗ್ರಹಿಸುತ್ತೇನೆ' ಎಂದಿದ್ದಾರೆ.


ಈ ಬಾರಿಯೂ ರಾಜ್ಯ ಅತಿವೃಷ್ಟಿಯ ಸಂಕಷ್ಟಕ್ಕೆ ಸಿಲುಕಿದ್ದು, ವಿಶೇಷವಾಗಿ ರೈತರು (Formers) ಕಂಗಾಲಾಗಿದ್ದಾರೆ. ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ  ಮುಂಗಾರಿನ ಅಬ್ಬರ ಭೀತಿಯ ವಾತಾವರಣ ಸೃಷ್ಟಿಸಿದೆ. ಜಿಲ್ಲಾವಾರು ವಿಶೇಷ ಕಾರ್ಯಪಡೆ ರಚಿಸುವ ಮೂಲಕ ನೆರೆ ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.


ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿರುವುದು ಭಾವನಾತ್ಮಕ ಸನ್ನಿವೇಶ: ಎಚ್.ಡಿ. ಕುಮಾರಸ್ವಾಮಿ

ಅತಿವೃಷ್ಟಿ ಸಂತ್ರಸ್ತರ ಪರಿಹಾರ ಕಾಮಗಾರಿಗಳಿಗೆ ಹಣಕಾಸಿನ ಕೊರತೆಯಾಗದಂತೆ ಸಕಾಲಿಕ ಎಚ್ಚರಿಕೆಯನ್ನು ಸರ್ಕಾರ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಒಂದು ಕಡೆ ಕೊರೋನಾ ಸೋಂಕಿನ ಭೀತಿ ಈಗ ನೆರೆಪೀಡಿತ ಪರಿಸ್ಥಿತಿ ಸರ್ಕಾರಕ್ಕೊಂದು ಅಗ್ನಿಪರೀಕ್ಷೆ. ಎಚ್ಚರ ತಪ್ಪಿದರೆ ಜನರ ಬದುಕು ಮೂರಾಬಟ್ಟೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.


ಸಚಿವರು ಮತ್ತು ಅಧಿಕಾರಿಗಳು ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ ಅಲ್ಲಿಯೇ ಮೊಕ್ಕಾಂ ಮಾಡಿ ಪರಿಸ್ಥಿತಿಯ ಉಸ್ತುವಾರಿ ನೋಡಿಕೊಳ್ಳುವ ಮೂಲಕ ನೆರೆ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.