ಬೆಂಗಳೂರು: COVID 19 ನಂತಹ ಕಡು ಕಷ್ಟ ಕಾಲದಲ್ಲೂ ರಾಜ್ಯ ಬಿಜೆಪಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದೆ.‌ ಬಿಜೆಪಿ ಸರ್ಕಾರದ ಸಚಿವರು‌ ಲೂಟಿ ಮಾಡಿಲ್ಲ ಎನ್ನುವುದಾದರೆವ ವೈದ್ಯಕೀಯ ಉಪಕರಣಗಳ ಖರೀದಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರ ಭಯ ಪಡುತ್ತಿರುವುದು ಏಕೆ? ಸಚಿವರು ಸತ್ಯವಂತರಾಗಿದ್ದರೆ  ತನಿಖೆ ಬೇಡ ಅಂತಾ ಏಕೆ ಹೇಳುತ್ತಿದ್ದಾರೆ? ಇದು ಭಂಡತನದ ಪರಮಾವಧಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ನಾವು ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಅವ್ಯವಹಾರದ ಬಗ್ಗೆ 14 ದಾಖಲೆಗಳನ್ನು ಕೊಟ್ಟ ಮೇಲೆ ಐವರು ಸಚಿವರು ಪತ್ರಿಕಾಗೋಷ್ಠಿ ಮಾಡಿ ನಿರಾಕರಿಸಿದ್ದಾರೆ. ಇದು ಭಂಡತನ ಅಷ್ಟೇ. ಜನರಿಗೆ ಸತ್ಯಾಸತ್ಯತೆ ಗೊತ್ತಾಗಬೇಕು ಎಂದರೆ ನ್ಯಾಯಾಂಗ ತನಿಖೆಯಾಗಲಿ. ನಾವು ಸುಳ್ಳು ಹೇಳುತ್ತೇವೆ, ಅವರೇ ಸತ್ಯವಂತರು ಎನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ ? ಇದು ಭಂಡತನ ಅಲ್ಲವೇ? ಎಂದು ಪ್ರಶ್ನಿಸಿದರು.


ಭೂ ಸುಧಾರಣಾ ಕಾಯಿದೆ ಬಗ್ಗೆ ರೈತ ಸಂಘಟನೆಗಳ ಜೊತೆ ಸೇರಿ ಹೋರಾಟ: ಸಿದ್ದರಾಮಯ್ಯ


ಸತ್ಯ ಹೊರ ಬಂದರೆ ಜನರೇ ತೀರ್ಮಾನ ಮಾಡುತ್ತಾರೆ. ನಮ್ಮ ಮತ್ತು ಅವರ ದಾಖಲೆಗಳು ನ್ಯಾಯಾಂಗ ತನಿಖೆಯ ಮುಂದೆ ಬರಲಿ. ಇದೇ ಕಾರಣಕ್ಕೆ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಲಿ ಎಂದು ಒತ್ತಾಯಿಸುತ್ತೇನೆ. ತನಿಖೆಗೆ ಸರ್ಕಾರ ಆದೇಶ ಮಾಡುವುದಿಲ್ಲ ಎಂದಾದರೆ ಅವರು ಕಳ್ಳತನ ಮಾಡಿದ್ದಾರೆ ಎಂದು ಅರ್ಥ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.


ಮಂತ್ರಿಗಳಾಗಿರುವುದೇ ಸುಳ್ಳಾ?
ಪತ್ರಿಕಾಗೋಷ್ಠಿಯಲ್ಲಿ ನಿನ್ನೆ ನಾವು ಕೊಟ್ಟಿರುವುದು ಸರ್ಕಾರಿ ದಾಖಲೆಗಳೇ. ಅದು ಸುಳ್ಳು ಎನ್ನುವುದಾದರೆ ನಿನ್ನೆ ಸರ್ಕಾರದ ಪರವಾಗಿ‌ ಪತ್ರಿಕಾಗೋಷ್ಠಿ ನಡೆಸಿದವರು ಮಂತ್ರಿಗಳಾಗಿರುವುದೇ ಸುಳ್ಳಾ? ಸರ್ಕಾರದಲ್ಲಿ ಇರುವ ದಾಖಲೆಗಳೇ ಸುಳ್ಳಾ? ನಾವು ಕೊಟ್ಟಿರುವ ದಾಖಲೆಗಳನ್ನು  ನಾವೇ ಸೃಷ್ಟಿ ಮಾಡಿದ್ದಲ್ಲ. ಉದಾಹರಣೆಗೆ  ಕೇಂದ್ರ ಸರ್ಕಾರ ಪಿಎಂಒ ಕಚೇರಿಯಿಂದ ಹೊರಡಿಸಿರುವ ಪ್ರಕಟಣೆಯಲ್ಲಿ 50 ಸಾವಿರ ವೆಂಟಿಲೇಟರ್‍ಗಳನ್ನು  ತಲಾ ನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಲಾಗಿದೆ. ಇದಕ್ಕಾಗಿ ಎರಡು ಸಾವಿರ ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದೆ. 


COVID-19 ಚಿಕಿತ್ಸೆಗೆ ನೀಡುವ ಖಾಸಗಿ ಆಸ್ಪತ್ರೆಗಳು ಗುಣಮಟ್ಟ ಕಾಪಾಡಬೇಕು: ಸಿದ್ದರಾಮಯ್ಯ ಅಗ್ರಹ


ಹಾಗಾದರೆ ಕೇಂದ್ರ ಸರ್ಕಾರ ಹೇಳಿರುವುದು ಸುಳ್ಳು. ನಮಗೆ ಕೊಟ್ಟಿರುವ ವೆಂಟಿಲೇಟರ್‍ಗಳೂ ಕಳಪೆ ಎಂದು ಮಂತ್ರಿಗಳು ಹೇಳಲಿ ನೋಡೋಣ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಗುಣಮಟ್ಟದ ವಿಚಾರಕ್ಕೆ ಬರುವುದಾದರೆ ಕಾರುಗಳಲ್ಲಿ ಐಷಾರಾಮಿಯೂ ಇರುತ್ತದೆ. ಸಾಮಾನ್ಯದ್ದೂ ಇರುತ್ತದೆ. ಕೇಂದ್ರ ಸರ್ಕಾರ ಸಹ 18 ಲಕ್ಷ ರೂಪಾಯಿ ವೆಚ್ಚದಲ್ಲಿಯೇ ವೆಂಟಿಲೇಟರ್ ಖರೀದಿ ಮಾಡಬುದಿತ್ತು. ಕೇಂದ್ರ ಸಕಾರ 4 ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿ ಮಾಡಿವುದು ಸುಳ್ಳೇ ? ಇದಕ್ಕೆ ಮಂತ್ರಿಗಳು ನೀಡುವ ಉತ್ತರ ಏನು? ಎಂದು ಪ್ರಶ್ನಿಸಿದರು.


ಕಾರ್ಮಿಕ ಇಲಾಖೆಯಲ್ಲಿ ಒಂದು ಸಾವಿರ ಕೋಟಿ ರೂಪಾಯಿಗಳ ಅವ್ಯವಹಾರ ಆಗಿದೆ ಎಂದು ಹೇಳಿಲ್ಲ. ಅಷ್ಟು ಖರ್ಚಾಗಿದೆ ಎಂದಿದ್ದೇನೆ. ಆದರೆ ಫುಡ್ ಪ್ಯಾಕೇಟ್ ಕೊಡುವಲ್ಲಿ ಅವ್ಯವಹಾರ ಆಗಿದೆ. ಒಂದು ಸಾವಿರ ಕೋಟಿ ಖರ್ಚಾಗಿದೆ ಅದಕ್ಕೆ ಲೆಕ್ಕ ಕೊಡಿ ಅಂದೆ. ಇವರು 324 ಕೋಟಿ ರೂಪಾಯಿ ಮಾತ್ರ ಖರ್ಚು ಆಗಿದೆ ಎನ್ನುತ್ತಾರೆ. ಆದರೆ ನಿನ್ನೆ ಮಂತ್ರಿಗಳೇ 2118 ಕೋಟಿ ರೂಪಾಯಿ ವೆಚ್ಚ ಎಂದಿದ್ದು ಏಕೆ. ಅಂದರೆ ಅವರೇ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂಬುದು ಇದರ ಅರ್ಥವಲ್ಲವೇ ಎಂದರು.


ನನಗೇನೂ ಗೊತ್ತಿಲ್ಲದೆ ಟಿಕೆಟ್ ಕೊಡಿಸಿದೆ
ವೈದ್ಯಕೀಯ ಶಿಕ್ಷಣ ಇಲಾಖೆಯ ಕಡತದಲ್ಲಿ ಇರುವ ವಿಚಾರದ ಬಗ್ಗೆ  ನಾನು ಹೇಳಿದ್ದು ಏನೆಂದರೆ 815 ಕೋಟಿಗೆ ಪ್ರಸ್ತಾವನೆ ಕಳುಹಿಸಿರುವುದು ನಿಜ. ತಜ್ಞರ ಶಿಫಾರಸು ಇಲ್ಲದೆ ಉಪಕರಣಗಳ ಖರೀದಿಗೆ ಮುಂದಾಗಿರುವುದಾಗಿ ಟಿಪ್ಪಣಿ ಬರೆಯಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಇದರ ಬಗ್ಗೆ ನನ್ನ ಮೇಲೆ ಆರೋಪ ಮಾಡಿದ್ದಾರೆ. ಮಾಹಿತಿ ಇಲ್ಲ ಎಂದಿದ್ದಾರೆ. ಖರ್ಚು, ವೆಚ್ಚ, ಪ್ರಸ್ತಾವನೆ. ಮಂಜೂರಾತಿ, ಹಣ ಬಿಡುಗಡೆ ಏನು ಎಂಬುದು ಗೊತ್ತಿಲ್ಲದೆ ನಾನು 13 ಬಜೆಟ್ ಮಂಡಿಸಿದ್ದೇನಾ? ಎಂದರು.


ಸುಧಾಕರ್ ಅವರು ಮಂತ್ರಿಯಾಗಿ ಎಷ್ಟು ವರ್ಷ ಆಯಿತು? ನಾನು ಮೊದಲ ಬಾರಿಗೆ ಮಂತ್ರಿಯಾಗಿದ್ದು ಯಾವಾಗ? ಅವರಿಗೆ ಸ್ವಲ್ಪ ಉಪಕಾರ ಸ್ಮರಣೆ ಇರಬೇಕು. ನಾನು ರಾಜ್ಯ ಮಂತ್ರಿ, ಸಂಪುಟ ದರ್ಜೆ ಮಂತ್ರಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದೇನೆ. 13 ಬಾರಿ ಬಜೆಟ್ ಮಂಡಿಸಿದ್ದೇನೆ. ಹೀಗಿರುವಾಗ ಸುಧಾಕರ್ ನನಗೆ ಪಾಠ ಹೇಳಿಕೊಟ್ಟರೆ ಹೇಗೆ? ಅಧಿಕಾರದ ಅಹಂನಿಂದ ಅವರು ಈ ರೀತಿ ಮಾತನಾಡುತ್ತಾರೆ. ಉಪಕಾರ ಸ್ಮರಣೆ ಮರೆತು ಬಾಯಿಗೆ ಬಂದಂತೆ ಮಾತನಾಡಬಾರದು. ಅಧಿಕಾರ ಬಂದ ಬಳಿಕ ಎಲ್ಲವನ್ನೂ ಮರೆಯಬಾರದು ಎಂದು ಸುಧಾಕರ್ ಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.


ನಿನ್ನೆ ದಾಖಲಾತಿಗಳ ಮೂಲಕ ನಾನು ಮಾತನಾಡಿದ್ದೇನೆ. ಅವರು ಏನಾದರೂ ದಾಖಲೆಗಳನ್ನು ಕೊಟ್ಟಿದ್ದಾರೆಯೇ? ಸಮ್ಮಿಶ್ರ ಸರ್ಕಾರ ಇದ್ದಾಗ ಖರೀದಿ ಮಾಡಿರುವ ವೆಂಟಿಲೇಟರ್ ಗಳ ಬಗ್ಗೆ ಅವರು ಮಾತನಾಡಿದ್ದಾರೆ. ನಾನು ಆಗ ಅಧಿಕಾರದಲ್ಲಿ ಇರಲಿಲ್ಲ. ಮುಖ್ಯಮಂತ್ರಿಯೂ ಆಗಿರಲಿಲ್ಲ. ದಾಖಲೆಗಳು ಅವರ ಬಳಿಯೇ ಇದೆ ಅಲ್ಲವೇ? ಆ ಬಗ್ಗೆಯೂ ತನಿಖೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿ. ಯಾರು ತಪ್ಪು ಮಾಡಿದರೂ, ಯಾವಾಗ ತಪ್ಪು ಮಾಡಿದರೂ ತಪ್ಪೇ. 


ಸಚಿವರು ಪಾಂಡವರು, ಕೌರವರ ಬಗ್ಗೆ ಮಾತನಾಡಿದ್ದೇನೆ. ಅವರು ಕೌರವರು ಆಗಲಿಕ್ಕೂ ಲಾಯಕ್ಕಿಲ್ಲ. ಮಹಾಭಾರತದ ಪಾಂಡವರು, ಕೌರವರ ವಿಚಾರ ಈಗ ಏಕೆ? ದ್ವಾಪರ ಯುಗದಲ್ಲಿ ನಡೆದಿದ್ದನ್ನು ಈಗ ಈ ವಿಚಾರದಲ್ಲಿ ಎಳೆದು ತರುವುದೇಕೆ? ಎಂದರು.


ಸಿದ್ದರಾಮಯ್ಯ ಈಸ್ ಸಿದ್ದರಾಮಯ್ಯ
ಸಿದ್ದರಾಮಯ್ಯ ಈಸ್ ಸಿದ್ದರಾಮಯ್ಯ. ನಾನು ನನ್ನನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳುವುದಿಲ್ಲ. ನಾನು ಪಾಂಡವನೂ ಅಲ್ಲ, ಕೌರವನೂ ಅಲ್ಲ, ಐಯಾಮ್ ಸಿದ್ದರಾಮಯ್ಯ ಓನ್ಲಿ. ಇವತ್ತು ಏನಾದರೂ ನೀತಿ, ನಿಯಮಗಳು ಇದ್ದರೆ ರಾಮಾಯಣ, ಮಹಾಭಾರತವೇ ಅದನ್ನು ಹೇಳಿಕೊಡುವುದು. ನಮಗೆ ರಾಜಕೀಯ ಹೇಳಿಕೊಡುವುದು ರಾಮಾಯಣ, ಮಹಾಭಾರತವೇ ಎಂದು ಸಿದ್ದರಾಮಯ್ಯ ಅವರು ಹೇಳಿದರು.