ಪ್ರಶ್ನೆ ಕೇಳಿದ ಮಹಿಳೆ ವಿರುದ್ಧ ಸಿದ್ದರಾಮಯ್ಯ ಗರಂ! ಕಾರಣ ಏನ್ ಗೊತ್ತಾ?
ಗ್ರಾಮದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಜನಪ್ರತಿನಿಧಿಗಳು ಕೈಗೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡು ಬಂದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಜಮಲಾರ್ ವಿರುದ್ಧ ಗರಂ ಆದ ಘಟನೆ ನಡೆದಿದೆ.
ಮೈಸೂರು: ಯಾವುದೇ ವಿಚಾರವಿರಲಿ, ಬಹಳ ಆಲೋಚಿಸಿ, ಯಾವುದೇ ಸಂದಿಗ್ಧತೆಗೆ ಸಿಲುಕದಂತೆ ಉತ್ತರಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಾರ್ವಜನಿಕ ಸಭೆಯೊಂದರಲ್ಲಿ ಮಹಿಳೆಯ ವಿರುದ್ಧ ಗರಂ ಆಗಿದ್ದು, ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.
ಇಂದು ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಗರ್ಗೆಶ್ವರಿ ಗ್ರಾಮಕ್ಕೆ ಕಾಮಗಾರಿಯೊಂದರ ಶಂಕುಸ್ಥಾಪನೆಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರ ಬಳಿ, ಅಧಿಕಾರಿಗಳು ಗ್ರಾಮದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಜನಪ್ರತಿನಿಧಿಗಳು ಕೈಗೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡು ಬಂದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಜಮಲಾರ್ ವಿರುದ್ಧ ಗರಂ ಆದ ಘಟನೆ ನಡೆದಿದೆ.
ಸಿದ್ದರಾಮಯ್ಯ ಗರಂ ಆಗಿದ್ದೇಕೆ?
ಮಹಿಳೆಯ ದೂರನ್ನು ಆರಂಭದಿಂದಲೂ ಸಮಾಧಾನದಿಂದಲೇ ಆಲಿಸುತ್ತಿದ್ದ ಸಿದ್ದರಾಮಯ್ಯ ಅವರು, ತಮ್ಮ ಮಗ ಶಾಸಕ ಯತಿಂದ್ರ ಅವರ ಬಗ್ಗೆ ದೂರುತ್ತಿದ್ದಂತೆಯೇ ಕೆಂಡಾಮಂಡಲವಾದರೂ. ಆದರೂ ಮಹಿಳೆ ಟೇಬಲ್ ಕುಟ್ಟಿ ಜೋರಾಗಿ ಮಾತಾಡಲು ಆರಂಭಿಸಿದ ಕೂಡಲೇ ಮತ್ತಷ್ಟು ಕೋಪಗೊಂಡ ಸಿದ್ದರಾಮಯ್ಯ, "ನನ್ನ ಮುಂದೆಯೇ ಟೆಬಲ್ ಕುಟ್ಟಿ ಮಾತನಾಡುತ್ತಿದ್ದಿಯಾ. ಕುತ್ಕೋಳಮ್ಮ ಸುಮ್ಮನೆ ಎಂದು ಗದರಿಸಿದರು. ಮೈಕ್ ಹಿಡಿದೇ ಮಹಿಳೆ ಜಮಲಾರ್‌ರನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಕೊನೆಗೆ ಮಹಿಳೆ ಬಳಿ ಮೈಕ್ ಕಿತ್ತುಕೊಂಡು ಕೋಪ ಪ್ರದರ್ಶನ ಮಾಡಿದರು.
ಬಳಿಕ ಸಾರ್ವಜನಿಕವಾಗಿಯೇ ತಪ್ಪಾಯ್ತು ಸಾರ್ ಎಂದು ಮಹಿಳೆ ಸಿದ್ದರಾಮಯ್ಯ ಅವರನ್ನು ಕ್ಷಮೆ ಕೇಳಿದರು. ಆದರೆ, ಸಿದ್ದರಾಮಯ್ಯ ಮಹಿಳೆಯ ದುಪ್ಪಟ್ಟ ಎಳೆದು ಕೋಪ ಪ್ರದರ್ಶಿಸಿದರಲ್ಲದೆ ಅಸಭ್ಯವಾಗಿ ವರ್ತಿಸಿದರು ಎಂದು ಹಲವರು ಆರೋಪಿಸಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರು ಮಹಿಳೆಯ ವಿರುದ್ಧ ಕೋಪಗೊಂಡ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿಜಕ್ಕೂ ಅಲ್ಲಿ ನಡೆದದ್ದೇನು?
ಘಟನೆ ಬಗ್ಗೆ ಸ್ಪಷ್ಟೀಕರಣ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, "ಕೆಲವೊಮ್ಮೆ ಸಾರ್ವಜನಿಕರು ಬಹಳ ಒರಟಾಗಿ ಪ್ರಶ್ನೆಗಳನ್ನು ಕೇಳುತ್ತಾರೆ. ಆ ಸಂದರ್ಭಗಳು ನಮ್ಮ ತಾಳ್ಮೆಯನ್ನೂ ಪರೀಕ್ಷಿಸುತ್ತವೆ. ಒಂದು ಸಾರಿ ಹೇಳಿದರೂ ಜನರು ಸಮಾಧಾನಗೊಳ್ಳದ ಸಂದರ್ಭದಲ್ಲಿ ಮೈಕ್ ಕಿತ್ತುಕೊಳ್ಳಬೇಕಾಗುತ್ತದೆ. ಅದನ್ನೇ ಸಿದ್ದರಾಮಯ್ಯ ಕೂಡ ಮಾಡಿದ್ದಾರೆ. ಆದರೆ, ಮೈಕ್ ಕಿತ್ತುಕೊಳ್ಳುವಾಗ ಮಹಿಳೆಯ ದುಪ್ಪಟ್ಟಾ ಸಹ ಎಳೆದು ಬಂದಿದೆ. ಇದರಲ್ಲಿ ಯಾವುದೇ ದುರಾಲೋಚನೆ ಇರಲಿಲ್ಲ" ಎಂದು ಹೇಳಿದ್ದಾರೆ.
ತನಿಖೆ ನಡೆಸುವಂತೆ ಒತ್ತಾಯ
ಏತನ್ಮಧ್ಯೆ, ಈ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ಡಿಜಿಪಿ ನೀಲಮಣಿ ರಾಜು ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ(NCW)ಪತ್ರ ಬರೆದಿದೆ.