ಮಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಹಾಗೂ ಕೆಫೆ ಕಾಫಿ ಡೇ ಸ್ಥಾಪಕ ಜಿ. ಸಿದ್ಧಾರ್ಥ್ ದಿಢೀರ್ ನಾಪತ್ತೆಯಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ನಲ್ಲಿ ಮಂಗಳೂರು ನಗರದಿಂದ ಉಳ್ಳಾಲ ಕಡೆಗೆ ಹೋಗುವ ಮಾರ್ಗದಲ್ಲಿರುವ ನೇತ್ರಾವತಿ ಸೇತುವೆ ಬಳಿ ಸೋಮವಾರ ರಾತ್ರಿ  ನಡೆದಿದೆ.


COMMERCIAL BREAK
SCROLL TO CONTINUE READING

ಮೂಲಗಳ ಪ್ರಕಾರ, ಸಿದ್ದಾರ್ಥ್ ಸೋಮವಾರ ತನ್ನ ಇನ್ನೋವಾ ಕಾರಿನಲ್ಲಿ ಬಿಸಿನೆಸ್ ಸಂಬಂದಿತ ಪ್ರವಾಸಕ್ಕಾಗಿ ಚಿಕ್ಕಮಗಳೂರಿಗೆ ಹೋಗಿದ್ದರು. ಅಲ್ಲಿಂದ ಅವರು ಕೇರಳಕ್ಕೆ ಪ್ರಯಾಣಿಸಬೇಕಿತ್ತು. ಆದರೆ, ಸಿದ್ದಾರ್ಥ್‌ ನೇತ್ರಾವತಿ ಸೇತುವೆ ಮೇಲೆ ತೆರಳುತ್ತಿದ್ದಾಗ ಕಡೆಕಾರು ರಸ್ತೆಯಲ್ಲಿ ಹೋಗುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಕಾರು ನಿಲ್ಲಿಸಲು ಹೇಳಿ, ಮೊಬೈಲ್ ನಲ್ಲಿ ಮಾತನಾಡುತ್ತಾ ಕಾರಿನಿಂದ ಇಳಿದು ಮುಂದಕ್ಕೆ ಹೋಗಿದ್ದಾರೆ. ಆ ಬಳಿಕ ನಾಪತ್ತೆ ಆಗಿದ್ದಾರೆ ಎಂದು ತಿಳಿದುಬಂದಿದೆ.


ಕಾರಿನಿಂದ ಕೆಳಗಿಳಿದು ಹೋದ ಸಿದ್ದಾರ್ಥ್ ಗಾಗಿ ಕಾಯುತ್ತಿದ್ದ ಚಾಲಕ, ಅರ್ಧ ಗಂಟೆಯಾದರೂ ಸಿದ್ದಾರ್ಥ್ ಬರದಿದ್ದನ್ನು ಕಂಡು ಗಾಬರಿಗೊಂಡು ಅವರಿಗೆ ಕರೆ ಮಾಡಿದ್ದಾರೆ. ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಚಾಲಕ ಕೂಡಲೇ ಸಿದ್ದಾರ್ಥ್ ಅವರ ಕುಟುಂಬಕ್ಕೆ ಈ ಬಗ್ಗೆ ಮಾಹಿತಿ ನೀಡಿದರು.


ಸಿದ್ದಾರ್ಥ್ ನಾಪತ್ತೆಯಾದ ಪ್ರದೇಶ ನೇತ್ರಾವತಿ ನದಿಯ ದಡದಲ್ಲಿದೆ. ಫೋನ್ ನಲ್ಲಿ ಮಾತನಾಡುತ್ತ ತೆರಳಿದ್ದ ಸಿದ್ದಾರ್ಥ್ ಮತ್ತೆ ಬರಲೇಯಿಲ್ಲ. ಅಲ್ಲದೆ ಅವರ ಫೋನ್ ಕೂಡ ಸ್ವಿಚ್ ಆಫ್ ಎಂದು ಬರುತ್ತಿದೆ. ಬಹುಶಃ ಅವರು ನೇತ್ರಾವತಿ ನದಿಗೆ ಹಾರಿರಬಹುದು ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.


ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷ್ಮಿ ಗಣೇಶ್ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಪೊಲೀಸರು ಚಾಲಕರಿಂದ ಅಗತ್ಯ ವಿವರಗಳನ್ನು ಸಂಗ್ರಹಿಸಿ ಸಿದ್ದಾರ್ಥನನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.


ಸಿದ್ದಾರ್ಥ್ ಚಿಕ್ಕಮಗಳೂರು ಮೂಲದವರಾಗಿದ್ದು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮಗಳನ್ನು ಮದುವೆಯಾಗಿದ್ದಾರೆ. ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಸಿದ್ದಾರ್ಥ್ ಮುಂಬೈನ ಜೆಎಂ ಫೈನಾನ್ಷಿಯಲ್ ಲಿಮಿಟೆಡ್‌ನಲ್ಲಿ ಕೆಲಸ ಆರಂಭಿಸಿದರು. ನಂತರ ಬೆಂಗಳೂರಿಗೆ ಸ್ಥಳಾಂತರಗೊಂಡು ಶಿವನ್ ಸೆಕ್ಯುರಿಟೀಸ್ ಹೆಸರಿನಲ್ಲಿ ಕಂಪನಿಯನ್ನು ಪ್ರಾರಂಭಿಸಿದರು. ಕಂಪನಿಯು 2000 ನೇ ಇಸವಿಯಲ್ಲಿ ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್ ಎಂದು ಮರುನಾಮಕರಣಗೊಂಡಿತು.


ಅದರೊಂದಿಗೆ ಅವರು ಕೆಫೆ ಕಾಫಿ ಡೇ ಅನ್ನು ಸಹ ಪ್ರಾರಂಭಿಸಿದರು. ಚಿಕ್ಕಮಗಳೂರು ಕಾಫಿಯನ್ನು ವಿಶ್ವಾದ್ಯಂತ ಜನಪ್ರಿಯಗೊಳಿಸಿದ ಕೀರ್ತಿ ಸಿದ್ದಾರ್ಥ್ ಅವರಿಗೆ ಸಲ್ಲುತ್ತದೆ.