ಸರಳತೆಯಿಂದಲೇ ದೇಶದ ಜನರ ಮನಸ್ಸು ಗೆದ್ದಿದ್ದ ಜಾರ್ಜ್ ಫರ್ನಾಂಡಿಸ್: ಬಿಎಸ್‌ವೈ
ಮಾಜೀ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಿಧನವು ತೀವ್ರ ದುಃಖವುಂಟುಮಾಡಿದೆ- ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ಸರಳತೆಯಿಂದಲೇ ದೇಶದ ಜನರ ಮನಸ್ಸು ಗೆದ್ದಿದ್ದ ಮಾಜೀ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರ ನಿಧನವು ತೀವ್ರ ದುಃಖವುಂಟುಮಾಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಾರ್ಜ್ ಫರ್ನಾಂಡಿಸ್ ವಾಜಪೇಯಿ ಅವರ ಕೇಂದ್ರ ಸಚಿವ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದರು, ಅವರು ಕನ್ನಡಿಗರು ಎನ್ನುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿತ್ತು. ರಾಜ್ಯದಲ್ಲಿ ಹುಟ್ಟಿದರೂ ದೂರದ ಮುಂಬೈನಲ್ಲಿ ರಾಜಕೀಯ ಜೀವನ ರೂಪಿಸಿಕೊಂಡು ಕಾರ್ಮಿಕರು ಮತ್ತು ಶೋಷಿತರ ನಿಜವಾದ ಧ್ವನಿಯಾಗಿದ್ದರು.
ರಕ್ಷಣಾ ಸಚಿವರಾಗಿದ್ದಾಗ ಸಿಯಾಚಿನ್ ಅಂತಹ ಅತ್ಯಂತ ದುರ್ಗಮ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಸೇನಾ ಸಿಬ್ಬಂದಿಯ ಸಮಸ್ಯೆಗಳನ್ನು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದ್ದರು, ಸೈನಿಕರ ಮನೋಸ್ಥೈರ್ಯ ಹೆಚ್ಚಿಸಿದ್ದ ಅವರ ಆದರ್ಶ ನಡವಳಿಕೆ ಇತರರಿಗೂ ಮಾದರಿಯಾಗಿದೆ.
ಸೇನಾ ಸಾಮರ್ಥ್ಯ ಹೆಚ್ಚಿಸಿ ದೇಶವನ್ನು ಬಾಹ್ಯ ಶತ್ರುಗಳ ಉಪಟಳದಿಂದ ರಕ್ಷಿಸಿದ ಜಾರ್ಜ್ ಅವರ ನಿಧನದಿಂದ ದೇಶವು ಓರ್ವ ಆದರ್ಶ ರಾಜಕಾರಣಿಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಕೋರುವೆ. ಅವರ ಬಂಧುಗಳು ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಬಿಎಸ್‌ವೈ ಸಂತಾಪ ಸೂಚಿಸಿದ್ದಾರೆ.