ಡೀಲ್ ಪ್ರಕರಣ: ಹೈಕೋರ್ಟ್ ಮೊರೆ ಹೋದ ಜನಾರ್ಧನ ರೆಡ್ಡಿ
ತಮ್ಮ ವಿರುದ್ಧ ದೇವರಜೀವನಹಳ್ಳಿ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದುಗೊಳಿಸುವಂತೆಯೂ ಕೋರಿ ಜನಾರ್ಧನ ರೆಡ್ಡಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು: ತೆರಿಗೆ ವಂಚನೆ ಡೀಲ್ ಪ್ರಕರಣಕ್ಕೆ ಸಂಬಂಧಿಸದಂತೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಈ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿರುವ ಜನಾರ್ಧನ್ ರೆಡ್ಡಿ, ತಮ್ಮ ವಿರುದ್ಧ ರಾಜಕೀಯ ದುರುದ್ದೇಶದಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾಧಿಕಾರಿಗಳಾದ ಎಸಿಪಿ ಡಾ.ಹೆಚ್.ಎನ್.ವೆಂಕಟೇಶ್ ಪ್ರಸನ್ನ ಹಾಗೂ ಡಿಸಿಪಿ ಎಸ್.ಗಿರೀಶ್ ರಾಜಕೀಯ ಒತ್ತಡಕ್ಕೆ ಒಳಗಾಗಿ ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ ಪೊಲೀಸ್ ಅಧಿಕಾರಿಗಳ ಬದಲಾವಣೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರ ಏಕ ಸದಸ್ಯ ಪೀಠ ವಿಚಾರಣೆ ನಡೆಸಲಿದೆ.
ಅಷ್ಟೇ ಅಲ್ಲದೆ, ತಮ್ಮ ವಿರುದ್ಧ ದೇವರಜೀವನಹಳ್ಳಿ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದುಗೊಳಿಸುವಂತೆಯೂ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿರುವ ಏಕಸದಸ್ಯ ಪೀಠ ವಿಚಾರಣೆ ನಡೆಸಲಿದೆ ಎನ್ನಲಾಗಿದೆ. ಆದರೆ ಈ ಎರಡೂ ಅರ್ಜಿಗಳ ವಿಚಾರಣೆ ಎಂದು ನಡೆಯಲಿದೆ ಎಂಬ ಖಚಿತ ಮಾಹಿತಿ ದೊರೆತಿಲ್ಲ.